ಬೆಂಗಳೂರಿನಲ್ಲಿ ಬೆಡ್ ಗಳ ಸಂಖ್ಯೆ ಹೆಚ್ಚಿಸಲು ಕ್ರಮ: ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವ ಸ್ಥಳಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವ ಸ್ಥಳಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.
ಸೋಂಕಿನ ಪ್ರಮಾಣ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ನಗರ ವ್ಯಾಪ್ತಿಯಲ್ಲಿರುವ ವಿವಿಧ ಸಂಘ ಸಂಸ್ಥೆಗಳ ಸ್ಥಳಗಳನ್ನು ಕಾಯ್ದಿರಿಸಲಾಗುತ್ತಿದೆ. ಬೆಡ್ ಗಳನ್ನು ಹೆಚ್ಚಿಸುವ ಜತೆಗೆ ಸೂಕ್ತ ಮೂಲ ಸೌಕರ್ಯ ಕಲ್ಪಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದಿದ್ದಾರೆ.
ಬೆಂಗಳೂರಿನ ಹಜ್ ಭವನದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಮಾಡಲಾಗಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅನಿಲ್ ಕುಮಾರ್, ಸೋಂಕಿತರನ್ನು ಕರೆದೊಯ್ಯಲು ಆಂಬುಲೆನ್ಸ್ ಸಂಖ್ಯೆಗಳನ್ನು ಹೆಚ್ಚಿಸುವ, ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ವಾಹನಗಳನ್ನು ಸೂಕ್ತ ರೀತಿಯಲ್ಲಿ ನಿಯೋಜನೆ ಮಾಡುವಂತೆಯೂ ಅವರು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಒಂದೇ ವಾರದಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟು
ಬೆಂಗಳೂರಿನಲ್ಲಿ ಪ್ರತಿ 7 ದಿನಕ್ಕೆ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಒಂದು ಕೋಟಿ 20 ಲಕ್ಷ ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ ಜೂನ್ 23ರವರೆಗೆ 1,405 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಅಂದರೆ, ಕಳೆದ ಒಂದು ವಾರದಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿದೆ. ಜೂನ್ 14ರಂದು ಬೆಂಗಳೂರಿನಲ್ಲಿ 735 ಕೊರೊನಾ ವೈರಸ್ ಸೋಂಕಿತರಿದ್ದರು. ಒಂದು ಸಮಾಧಾನಕರ ಸಂಗತಿ ಎಂದರೆ, ಬೆಂಗಳೂರಿಗೆ ಹೋಲಿಸಿದರೆ ದೇಶದ ಬೇರೆ ಮಹಾನಗರದಲ್ಲಿ ಕೊರೋನಾ ವೈರಸ್ ಪೀಡಿತರ ಸಂಖ್ಯೆ ತುಂಬಾನೇ ಜಾಸ್ತಿ ಇದೆ.
ಬೆಂಗಳೂರಿನಲ್ಲಿ ಮೊದಲ ಕೊರೊನಾ ವೈರಸ್ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಮಾರ್ಚ್ 8ರಂದು. ಇನ್ನು ಬೆಂಗಳೂರಿನಲ್ಲಿ 100 ಪ್ರಕರಣಗಳಾಗಲು ಒಂದು ತಿಂಗಳ ಸಮಯ ಬೇಕಾಯ್ತು. 200 ಪ್ರಕರಣಗಳಾಗಲು ಮತ್ತೊಂದು ತಿಂಗಳ ಸಮಯ ತೆಗೆದುಕೊಂಡಿತು. ಆದ್ರೆ, ಮೇ 31ರ ಅನ್‌ಲಾಕ್ ಬಳಿಕ ಕೊರೊನಾ ವೈರಸ್ ವಿಪರೀತ ವೇಗದಲ್ಲಿ ಹರಡುತ್ತಿದೆ. 360 ಪ್ರಕರಣಗಳಿದ್ದ ಬೆಂಗಳೂರಿನಲ್ಲಿ 732 ಪ್ರಕರಣಗಳಾಗಲು ತೆಗೆದುಕೊಂಡ ಸಮಯ ಕೇವಲ 14 ದಿನ..! ಆದರೆ ಬೆಂಗಳೂರಿನಲ್ಲಿ ಗುಣಮುಖರಾಗುತ್ತಿರುವ ರೋಗಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಈವರೆಗೆ ನಗರದಲ್ಲಿ 378 ರೋಗಿಗಳು ಗುಣಮುಖರಾಗಿದ್ದಾರೆ. ಆದರೆ 65 ಮಂದಿ ಜೀವಬಿಟ್ಟಿದ್ಧಾರೆ.