ರಾಜ್ಯ

ಸೋಮವಾರದಿಂದ ಬಜೆಟ್ ಅಧಿವೇಶನ: ಆರ್ಥಿಕ ಸಂಕಷ್ಟದಲ್ಲಿ ಸರ್ಕಾರ, ಜನಪರ ಹೋರಾಟಕ್ಕೆ ಪ್ರತಿಪಕ್ಷಗಳ ಸಜ್ಜು

Nagaraja AB

ಬೆಂಗಳೂರು: ವಿಧಾನಮಂಡಲದ ಬಜೆಟ್ ಅಧಿವೇಶನ ಸೋಮವಾರದಿಂದ ಆರಂಭವಾಗುತ್ತಿದ್ದು, ರಾಜ್ಯಕ್ಕೆ ಬಾಧಿಸಿರುವ ಆರ್ಥಿಕ ಸಂಕಷ್ಟ, ರೈತರ ಸಾಲ ಮನ್ನಾ ಮಾಡಲು ನಿರ್ಲಕ್ಷ್ಯ ಮತ್ತಿತರ ಜನಪರ ಹೋರಾಟಕ್ಕೆ ಪ್ರತಿಪಕ್ಷಗಳು ಸಜ್ಜಾಗಿವೆ.

ಅನುಷ್ಠಾನಗೊಳ್ಳದ 2019 - 20 ನೇ ಸಾಲಿನ ಆಯವ್ಯಯ ಕಾರ್ಯಕ್ರಮಗಳು, ರೈತರ ಸಾಲ ಮನ್ನಾ ಮಾಡಲು ನಿರ್ಲಕ್ಷ್ಯ, ಪೌರತ್ವ ತಿದ್ದುಪಡಿ ಕಾಯ್ದೆ - ಸಿಎಎ ವಿವಾದ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ವಿರುದ್ಧದ ಹೇಳಿಕೆ, ಅದನ್ನು ಸಮರ್ಥಿಸುತ್ತಿರುವ ಬಿಜೆಪಿ ಸಚಿವರ ನಡಾವಳಿಕೆಗಳ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುವ ಸಾಧ್ಯತೆಯಿದೆ. 

ಸಾಲ ಮನ್ನಾ, ದೊರೆಸ್ವಾಮಿ ಸೇರಿದಂತೆ ಕೆಲವು ವಿಷಯಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ಹೋರಾಟ ನಡೆಸಲು ಉದ್ದೇಶಿಸಿದ್ದು, ಕೆಲ ವಿಚಾರಗಳಲ್ಲಿ ರಚನಾತ್ಮಕ ಹೋರಾಟದ ಮೂಲಕ ಬಿಜೆಪಿ ಸರ್ಕಾರವನ್ನು ಕಟ್ಟಿಹಾಕಲು ವ್ಯವಸ್ಥಿತ ಕಾರ್ಯತಂತ್ರ ರೂಪಿಸುತ್ತಿವೆ.

ಆಡಳಿತ ಸರ್ಕಾರದ ಹಲವು ವೈಫಲ್ಯಗಳ ವಿರುದ್ಧ ಹೋರಾಡಲು ಪ್ರತಿಪಕ್ಷಗಳು ನಿರ್ಧರಿಸಿದ್ದರೆ, ಬಜೆಟ್‌ಗೆ ಹಣ ಹೊಂದಿಸಲು ಹೆಣಗುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಪ್ರತಿ ಕೆಜಿ ಅಕ್ಕಿಗೆ ಮೂರು ರೂಪಾಯಿ ದರ ನಿಗದಿ ಮಾಡಲು ಚಿಂತನೆ ನಡೆಸಿದ್ದು, ಬಜೆಟ್ ನಲ್ಲಿ ಈ ಘೋಷಣೆ ಹೊರ ಬಿದ್ದರೆ  ಪ್ರತಿಪಕ್ಷಗಳಿಗೆ ಮತ್ತೊಂದು ಪ್ರಬಲ ಅಸ್ತ್ರ ದೊರೆತಂತಾಗಲಿದೆ.

SCROLL FOR NEXT