ರಾಜ್ಯ

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ: ವಿದ್ಯಾರ್ಥಿಗಳೇ 'ಆಲ್ ದಿ ಬೆಸ್ಟ್'

Sumana Upadhyaya

ಬೆಂಗಳೂರು: ರಾಜ್ಯಾದ್ಯಂತ ಬುಧವಾರ(ಮಾ.4)ದಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭವಾಗಿದ್ದು, ಈ ಬಾರಿ ಒಟ್ಟಾರೆ ಸಾವಿರದ 016 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಈ ಬಾರಿ ಒಟ್ಟು 6 ಲಕ್ಷದ 80 ಸಾವಿರದ 049 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. 

ವಿಜ್ಞಾನ ವಿಭಾಗದಲ್ಲಿ ಒಟ್ಟು 2 ಲಕ್ಷದ 16 ಸಾವಿರದ 930 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 2 ಲಕ್ಷದ 61 ಸಾವಿರದ 674 ಹಾಗೂ ಕಲಾ ವಿಭಾಗದಲ್ಲಿ 2 ಲಕ್ಷದ 0 ಸಾವಿರದ 445 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 3 ಲಕ್ಷದ 41 ಸಾವಿರದ 618 ಬಾಲಕಿಯರು ಮತ್ತು 3 ಲಕ್ಷದ 38 ಸಾವಿರದ 431 ಬಾಲಕರು ಪರೀಕ್ಷೆ ಬರೆಯಲಿದ್ದಾರೆ. ಇಂದಿನಿಂದ ಮಾರ್ಚ್ 23ರವರೆಗೆ ಪರೀಕ್ಷೆ ನಡೆಯುತ್ತಿದೆ.


ವಿಶೇಷ ಭದ್ರತೆ: ಪ್ರಶ್ನೆ ಪತ್ರಿಕೆಗಳು ಆಯಾ ಜಿಲ್ಲೆಗಳ ಜಿಲ್ಲಾ ಖಜಾನೆಗಳಿಂದ ತೀವ್ರ ಭದ್ರತೆ ನಡುವೆ ತೆರೆಯಲಾಗುತ್ತದೆ. ಯಾವುದೇ ಕಾರಣಕ್ಕೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಯಂತ್ರಣ ಘಟಕಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಅಕ್ರಮಗಳ ಮೇಲೆ ಜಿಲ್ಲಾಧಿಕಾರಿ ಕಚೇರಿಯಿಂದಲೇ ನಿಗಾ ಇಡಲಾಗುತ್ತದೆ.  


ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಇತರೆ ಯಾವುದೇ ಅಕ್ರಮಗಳು ನಡೆಯದಂತೆ ಕಣ್ಗಾವಲಿಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಬಳಿ ಇರುವ ಕ್ಸೆರಾಕ್ಸ್ ಅಂಗಡಿ, ಸೈಬರ್ ಕೆಫೆ, ಕಂಪ್ಯೂಟರ್ ಮತ್ತು ತರಬೇತಿ ಕೇಂದ್ರಗಳನ್ನು ಬಂದ್ ಮಾಡಲು ಸೂಚನೆ ಹೊರಡಿಸಲಾಗಿದೆ. ಪರೀಕ್ಷಾ ಅಕ್ರಮದಲ್ಲಿ ತೊಡಗುವವರಿಗೆ ತಲಾ ಐದು ಲಕ್ಷ ರೂಪಾಯಿ ದಂಡ ಹಾಗೂ ಐದು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಕಪ್ಪು ಪಟ್ಟಿ ಧರಿಸಿ ಉಪನ್ಯಾಸಕರ ಪ್ರತಿಭಟನೆ
ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದರ ಮಧ್ಯೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದ್ವಿತೀಯ ಪಿಯುಸಿ ಪರೀಕ್ಷೆ ವೇಳೆ 'ಕಪ್ಪುಪಟ್ಟಿ ಧರಿಸಿ' ಪರೀಕ್ಷಾ ಕಾರ್ಯಕ್ಕೆ ಹಾಜರಾಗುವ ಮೂಲಕ ಪ್ರತಿಭಟನೆ ನಡೆಸಲು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ತೀರ್ಮಾನಿಸಿದೆ.


ಉಪನ್ಯಾಸಕರಿಗೆ ವೇತನ ತಾರತಮ್ಯ ಸರಿಪಡಿಸುವ ಸಂಬಂಧ ಕುಮಾರ ನಾಯಕ್‌ ಸಮಿತಿ ವರದಿ ಜಾರಿಗೆ ತರುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈಗಾಗಲೇ ಮೂರು ಬಾರಿ ಭಾರಿ ಪ್ರತಿಭಟನೆ ನಡೆಸಲಾಗಿದೆ. ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದ ಕಾರಣ ಪಿಯುಸಿ ಪರೀಕ್ಷೆ ವೇಳೆ ಕಪ್ಪುಪಟ್ಟಿ ಧರಿಸಿ ಪರೀಕ್ಷಾ ಕಾರ್ಯಕ್ಕೆ ಹಾಜರಾಗುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್‌. ನಿಂಗೇಗೌಡ ತಿಳಿಸಿದ್ದಾರೆ. 

ಪಿಯುಸಿ ಪರೀಕ್ಷೆ ಯಶಸ್ಸಿಗೆ ಮೆಟ್ಟಿಲಾಗಲಿ: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಭ ಕೋರಿದ್ದಾರೆ. ವಿದ್ಯಾರ್ಥಿ ಜೀವನದ ಮುಖ್ಯ ಹಂತ ಇದಾಗಿದ್ದು, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆ ಮೂಲಕ ನಾಡಿನ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ. ಪರೀಕ್ಷೆ ಯಶಸ್ವಿ ಭವಿಷ್ಯಕ್ಕೆ ಮೆಟ್ಟಿಲಾಗಲಿ ಎಂದು ಶುಭ ಹಾರೈಸಿದ್ದಾರೆ.

ವದಂತಿ ಹಬ್ಬಿಸಬೇಡಿ, ಸುಳ್ಳು ಸುದ್ದಿ ನಂಬಬೇಡಿ: ಪಿಯುಸಿ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ ಕುರಿತು ಸುಳ್ಳು ಸುದ್ದಿ/ವದಂತಿ ಹರಡದಂತೆ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಅನಗತ್ಯ ಆತಂಕವಾಗದಂತೆ ಸಹಕರಿಸೋಣ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ. ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಗತ್ಯವಾಗಿ ಏನೇನು ಇಟ್ಟುಕೊಳ್ಳಬೇಕೆಂದು ಸಹ ಅವರು ಹೇಳಿದ್ದಾರೆ. 

ಇನ್ನು ಪರೀಕ್ಷಾ ಕೊಠಡಿಯಲ್ಲಿ ಉಪನ್ಯಾಸಕರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡುವುದು ಒಳ್ಳೆಯದಲ್ಲ, ಹಾಗೆ ಮಾಡದಂತೆ ಕೂಡ ಅವರು ಉಪನ್ಯಾಸಕರಿಗೆ ಮನವಿ ಮಾಡಿಕೊಂಡಿದ್ದಾರೆ. 

SCROLL FOR NEXT