ರಾಜ್ಯ

ಬಿಎಸ್ ವೈ ಆಡಳಿತದ ಕರಾಮತ್ತು, ಶಿವಮೊಗ್ಗ ಜಿಲ್ಲೆಗೆ ಒಂದಲ್ಲಾ ಒಂದು ಸಮಸ್ಯೆ: ಮಾಜಿ ಶಾಸಕ ಬೇಳೂರು ಕಿಡಿ

Srinivas Rao BV

ಶಿವಮೊಗ್ಗ: ಯಡಿಯೂರಪ್ಪ ರಾಜ್ಯಕ್ಕೆ ಮುಖ್ಯಮಂತ್ರಿಯಾದಾಗಲೆಲ್ಲ ರಾಜ್ಯಕ್ಕೆ ಏನು ಒಳ್ಳೆಯದಾಯಿತೊ ಗೊತ್ತಿಲ್ಲ ಆದರೆ ತವರು ಶಿವಮೊಗ್ಗ ಜಿಲ್ಲೆಗೆ ಮಾತ್ರ ಒಂದಲ್ಲಾ ಒಂದು ತೊಂದರೆ ಸಮಸ್ಯೆ ಯಾಗುತ್ತಿದ್ದು ಇದೇ ಬಿಎಸ್ ವೈ ಆಡಳಿತದ ಕರಾಮತ್ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ವಿದ್ಯುತ್ ಕೊರತೆ ತುಂಬಾ ಕಾಡುತ್ತಿದೆ. ರೈತರಿಗೆ ಸಮಸ್ಯೆಯಾಗುತ್ತಿದ್ದು ಟಿಸಿ ಹೋಗಿದ್ದರೇ ಒಂದು ವಾರವಾದರೂ ಟಿಸಿ ಬದಲಾಯಿಸುವುದಿಲ್ಲ. ಆದರೆ ಶಿಕಾರಿಪುರ ತಾಲೂಕು ಮಾತ್ರ ಯಾವ ಸಮಸ್ಯೆಯಿರದೆ ಎಲ್ಲದರಿಂದ ಮುಕ್ತವಾಗಿರುತ್ತದೆ ಇದು ಯಡಿಯೂರಪ್ಪ ಆಡಳಿತದ ಕರಾಮತ್ತಿಗೆ ಹಿಡಿದ ಕನ್ನಡಿ ಎಂದು ಅವರು ವ್ಯಂಗವಾಡಿದರು. ಶಿವಮೊಗ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕರೋನಾ ರೀತಿಯಲ್ಲಿ ಮಂಗನ ಕಾಯಿಲೆ ಜಿಲ್ಲೆಯನ್ನು ಕಾಡುತ್ತಿದೆ. ಅದರೆ ಈವರೆಗೆ ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದರು.

ಸೊರಬದಲ್ಲಿದ್ದ ಮಂಗನಕಾಯಿಲೆ ಈಗ ಗಡಿ ದಾಟಿ ಸಾಗರಕ್ಕೂ ಬಂದಿದೆ. ಸಾಗರದ ಶಾಸಕರು ಅಲ್ಲಿಂದ ಇಲ್ಲಿಗೆ ಬಂದಿದ್ದಕ್ಕೆ ಮಂಗನ ಕಾಯಿಲೆಯೂ ಇಲ್ಲಿಗೆ ಬಂದಿದೆ ಎಂದುಶಾಸಕ ಹರತಾಳು ಹಾಲಪ್ಪ ವಿರುದ್ದ ಬೇಳೂರು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು. ಶಿವಮೊಗ್ಗ ಸಂಸದರು ಮಂಕಿ ಪಾರ್ಕ್ ಮಾಡುತ್ತೇವೆ ಎಂದಿದ್ದರು. ಅದರೆ ಈಗ ಅದರ ಬಗ್ಗೆ ಸಂಸದ ರಾಘವೇಂದ್ರ ಮಾತನಾಡುತ್ತಿಲ್ಲ. ಅದಷ್ಟು ಬೇಗ ಮಂಕಿ ಪಾರ್ಕ್ ಮಾಡಿ, ಹಾಲಪ್ಪ ಅವರಿಗೆ ಅದರ ಉಸ್ತುವಾರಿ ವಹಿಸಿಕೊಡಬೇಕು ಎಂದು ಅವರು ಮೂದಲಿಸಿದರು. 

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ ಕೆ ಶಿವಕುಮಾರ್ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ಮುಂದಿನ 3- 4 ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆ ಆಗಲಿದೆ ಎಂದು ಪರೋಕ್ಷ ಸುಳಿವು ನೀಡಿದರು.

SCROLL FOR NEXT