ರಾಜ್ಯ

ಮೈಸೂರಿನಲ್ಲಿ ಹಕ್ಕಿ ಜ್ವರ ಎರಡು ಪ್ರಕರಣ ದೃಢ: ಕುಂಬಾರಕೊಪ್ಪಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಕೋಳಿ ಮಾರಾಟ ನಿಷೇಧ

Manjula VN

ಮೈಸೂರು: ಕೊರೋನಾ ವೈರಮ್ ಭೀತಿಯ ನಡುವೆ ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ಸರಣಿ ಕೊಕ್ಕರೆ, ಕೋಳಿಗಳ ಸಾವಿನಿಂದ ಎದುರಾಗಿದ್ದ ಹಕ್ಕಿ ಜ್ವರ ಭೀತಿ ನಿಜವಾಗಿದೆ. ಹಕ್ಕಿ ಜ್ವರದಿಂದಲೇ 1 ಕೋಟಿ ಹಾಗೂ 1 ಕೊಕ್ಕರೆ ಮೃತಪಟ್ಟಿರುವುದು ಇದೀಗ ದೃಢಪಟ್ಟಿದೆ. 

ಮೈಸೂರು ನಗರದ ಕುಂಬಾರಕೊಪ್ಪಲು ವ್ಯಾಪ್ತಿಯಲ್ಲಿ ಮೃತಪಟ್ಟ ಸಾಕುಕೋಳಿ ಮತ್ತು ಕೊಕ್ಕರೆಯಲ್ಲಿ ಹಕ್ಕಿ ಜ್ವರ ಇದ್ದದ್ದು ದೃಢಪಟ್ಟಿದೆ. ಮನೆಯಲ್ಲಿ ಸಾಕಿದ್ದ ಕೋಳಿ ಹಾಗೂ ಸ್ಮಶಾನದಲ್ಲಿ ಮೃತಪಟ್ಟ ಕೊಕ್ಕರೆಯಲ್ಲಿ ಹಕ್ಕಿಜ್ವರ ಇರುವುದು ಖಾತ್ರಿಯಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೋಮವಾರ ಹೇಳಿದ್ದಾರೆ. 

ಮೈಸೂರಿನಲ್ಲಿ ವಾರದ ಹಿಂದೆ ಕೋಳಿ ಮತ್ತು ಪಕ್ಷಿಗಳು ಮೃತಪಟ್ಟ ಹಿನ್ನೆಲೆಯಲ್ಲಿ 7 ಮಾದರಿಗಳನ್ನು ಭೂಪಾಲ್ ನಲ್ಲಿರುವ ಎವಿನಿಯನ್ ಇನ್ ಫ್ಲುಂಜಾ ಟೆಸ್ಟಿಂಗ್ ಲ್ಯಾಬೋರೇಟರಿಗೆ ಕಳುಹಿಸಲಾಗಿತ್ತು. ಇದರಲ್ಲಿ 2 ಪಾಸಿಟಿವ್ ಬಂದಿದೆ. ಉಳಿದವು ನೆಗೆಟಿವ್ ಆಗಿದೆ. ಹಕ್ಕಿಜ್ವರ ಇರುವ ಬಗ್ಗೆ ಲ್ಯಾಬ್ ನಿಂದ ವರದಿ ಬಂದ ಕೂಡಲೇ ಪಶುಸಂಗೋಪನಾ ಇಲಾಖೆಯ ಸಿಬ್ಬಂದಿ ರ್ಯಾಪಿಡ್ ರೆಸ್ಪಾನ್ಸ್ ಟೀಂ ರಚಿಸಲಾಗಿದ್ದು, ಈಗಾಗಲೇ ಅವರು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದರು. 

ಹಕ್ಕಿಜ್ವರ ಕಂಡು ಬಂದಿರುವ ಕುಂಬಾರಕೊಪ್ಪಲು ಸುತ್ತಮುತ್ತ 1 ಕಿಮೀ ವ್ಯಾಪ್ತಿಯನ್ನು ಸೋಂಕಿತ ವಲಯ ಎಂದು ಘೋಷಿಸಲಾಗಿದೆ. ಈ ವಲಯದಲ್ಲಿರುವ ಕೋಳಿ, ಬಾತು ಕೋಳಿ ಸೇರಿದಂತೆ ಎಲ್ಲ ರೀತಿಯ ಸಾಕು ಪಕ್ಷಿಗಳನ್ನು ಕೊಲ್ಲುವ ಕಾರ್ಯಾಚರಣೆ (ಕಲ್ಲಿಂಗ್ ಆಪರೇಷನ್) ಕೈಗೊಳ್ಳಲಾಗುವುದು. ಸಿಬ್ಬಂದಿಗೆ ಅಗತ್ಯ ಮಾಸ್ಕ್, ಶೂ ಹಾಗೂ ಇನ್ನಿತರ ಪರಿಕರ ಗಳನ್ನು ನೀಡಲಾಗುವುದು. ನಮ್ಮಲ್ಲಿ ಸಾಕಷ್ಟು ಔಷಧವಿದ್ದು, ಇನ್ನೂ ಹೆಚ್ಚಿನ ಔಷಧವನ್ನು ಬೆಂಗಳೂರಿನಿಂದ ತರಿಸಿಕೊಳ್ಳಲಾಗುತ್ತಿದೆ. ಪಾಲಿಕೆ ಸಿಬ್ಬಂದಿಯನ್ನೂ ಈ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುವುದು ಎಂದು ವಿವರಿಸಿದರು. 

ಸೋಂಕಿತ ವಲಯದಿಂದ ಯಾವುದೇ ಪಕ್ಷಿ ಹೊರಗೋ ಅಥವಾ ಒಳಗೆ ತೆಗೆದುಕೊಂಡು ಹೋಗದಂತೆ ನೋಡಿಕೊಳ್ಳಲು ಚೆಕ್ ಪೋಸ್ಟ್ ಸಹ ನಿರ್ಮಿಸಲಾಗುತ್ತಿದೆ. ಕುಂಬಾರ ಕೊಪ್ಪಲು ವ್ಯಾಪ್ತಿಯಲ್ಲಿ ಯಾವುದೇ ಪೌಲ್ಟ್ರಿ ಫಾರಂಗಳು ಇಲ್ಲ. ಇದ್ದಿದ್ದರೆ ಸಾವಿರಾರು ಕೋಳಿಗಳನ್ನು ಒಮ್ಮೆಲೆ ಕೊಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ, ಮನೆಯಲ್ಲಿ ಸಾಕಿರುವ ಕೋಳಿ ಹಾಗೂ ಇನ್ನಿತರ ಪಕ್ಷಿಗಳ ಸಂಖ್ಯೆ ಕಡಿಮೆಯಿದೆ ಎಂದರು. 

ಇನ್ನೂ ಕುಂಬಾರಕೊಪ್ಪಲಿನಿಂದ 10 ಕಿ.ಮೀ ವ್ಯಾಪ್ತಿಪ್ರದೇಶವನ್ನು ಕಣ್ಗಾವಲು ವಲಯ ಎಂದು ಘೋಷಿಸಲಾಗಿದೆ. ಕಲ್ಲಿಂಗ್ ಆಪರೇಷನ್ ನಡೆಯುವ ಸಂದರ್ಭದಲ್ಲಿ ಈ ವಲಯದಲ್ಲಿ ಮೊಟ್ಟೆ ಮತ್ತು ಕೋಳಿ ಮಾಂಸ ಮಾರಾಟ ನಿಷೇಧಿಸಲಾಗಿದೆ. 10 ಕಿಮೀ ವ್ಯಾಪ್ತಿಯ ಎಲ್ಲಾ ಕೋಳಿ ಅಂಗಡಿಗಳನ್ನೂ ಮುಚ್ಚಲಾಗುವುದು ಎಂದು ಅವರು ತಿಳಿಸಿದರು. 

ಕಲ್ಲಿಂಗ್ ಆಪರೇಷನ್ ಮಾಡಿದ ಮೇಲೆ ಆ ಪ್ರದೇಶವನ್ನು ನೈರ್ಮಲ್ಯೀಕರಣ ಮಾಡಲಾಗುವುದು. ಈ ಎಲ್ಲಾ ಕಾರ್ಯಾಚರಣೆ 4-5 ದಿನ ಆಗುತ್ತದೆ. ಒಮ್ಮೆ ಕಲ್ಲಿಂಗ್ ಆಪರೇಷನ್ ಆದ ಮೇಲೆ ಕೆಲವರು ಮನೆಗಳಲ್ಲಿ ಪಕ್ಷಿಗಳನ್ನು ಬಚ್ಚಿಟ್ಟಿರಬಹುದು. ಹೀಗಾಗಿ ಕೂಬಿಂಗ್ ಮಾಡಲಾಗುತ್ತದೆ. ನಂತರ ಹಕ್ಕಿ ಜ್ವರ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂದು ಪ್ರಮಾಣ ಪತ್ರ ನೀಡಿ, ನಿರ್ಬಂಧ ತೆರವುಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು. 

ಸೋಂಕಿತ ಪ್ರದೇಶದೊಳಗೆನೇ ಕೋಳಿ ಮತ್ತು ಇತರೆ ಪಕ್ಷಿಗಳನ್ನು ಕಲ್ಲಿಂಗ್ ಮಾಡಿ ವಿಲೇವಾರಿ ಮಾಡಬೇಕಿದೆ. ಹೊರಗಡೆ ತೆಗೆದುಕೊಂಡು ಹೋಗುವುದಿಲ್ಲ. ಹೀಗಾಗಿ ಕುಂಬಾರ ಕೊಪ್ಪಲು ಸುತ್ತಮುತ್ತ ಎಷ್ಟು ಪಕ್ಷಿಗಳಿಗೆ ಎಂಬುದರ ಬಗ್ಗೆ ಸಮೀಕ್ಷೆ ಮಾಡಲಾಗುತ್ತಿದೆ. ಪಕ್ಷಿಗಳ ಸಂಖ್ಯೆ ಆಧಾರದ ಮೇಲೆ ಜಾಗ ನಿಗದಿಪಡಿಸಿ ವಿಲೇವಾರಿ ಮಾಡಲಾಗುವುದು. ವಿಲೇವಾರಿ ಮಾಡಲು ರಾಸಾಯನಿಕಗಳನ್ನು ಬಳಸಲಾಗುವುದು. ಟ್ಯಾಮಿ ಫ್ಲೂ ಮಾತ್ರೆಗಳು ಸಾಕಷ್ಟು ಇದ್ದ, ೀಗಾಗಲೇ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆಂದು ಹೇಳಿದರು.  

ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಅಜಿತ್ ಕುಮಾರ್ ಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್ ಇದ್ದರು. 

SCROLL FOR NEXT