ರಾಜ್ಯ

ರಾಯಚೂರಿನಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸುವ ವಿಧೇಯಕಕ್ಕೆ ವಿಧಾನಸಭೆ ಅನುಮೋದನೆ

Lingaraj Badiger

ಬೆಂಗಳೂರು: ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಹೊಸದಾಗಿ ರಾಯಚೂರು ವಿಶ್ವವಿದ್ಯಾಲಯ ಸ್ಥಾಪಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ(ತಿದ್ದುಪಡಿ) ವಿಧೇಯಕ 2020' ಅನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು. 

ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಸಿ.ಎನ್. ಅವರ ಪರವಾಗಿ ಕಾನೂನು ಸಚಿವ ಮಾಧುಸ್ವಾಮಿ ಈ ವಿಧೇಯಕವನ್ನು ಮಂಡಿಸಿದರು. 

ವಿಧೇಯಕದ ಕುರಿತು ವಿವರ ನೀಡಿದ ಮಾಧುಸ್ವಾಮಿ, ಡಾ. ನಂಜುಂಡಪ್ಪ ಸಮಿತಿ ವರದಿಯ ಅನುಸಾರ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ರಾಜ್ಯದಲ್ಲಿ ಅತಿ ಕಡಿಮೆ ಪ್ರವೇಶಾತಿಯನ್ನು ಹೊಂದಿದೆ. ಇಲ್ಲಿನ ವಿದ್ಯಾರ್ಥಿಗಳು ಗುಲ್ಬರ್ಗಾ ವಿಶ್ವವಿದ್ಯಾನಿಲಯಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋಗುವ ಅನಿವಾರ್ಯತೆಯಿದೆ. ಆದ್ದರಿಂದ ವಿವಿಯ ಒತ್ತಡ ಕಡಿಮೆ ಮಾಡುವ ಹಾಗೂ ಪ್ರಾದೇಶಿಕ ಅಸಮತೋಲತೆಯನ್ನು ಕಡಿಮೆಯಾಗಿಸಲು ರಾಯಚೂರಿನಲ್ಲಿ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದರು. 

ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಎಚ್ ಕೆ ಪಾಟೀಲ್, ವಿವಿಧ ಜಿಲ್ಲೆಗಳಲ್ಲಿನ ಹೊಸ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಆವರಣಗಳನ್ನು ಜನರು ವಿರೂಪಗೊಳಿಸುತ್ತಿದ್ದರು. ಅದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. 
ಇದಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ನಿಯಮ ರೂಪಿಸುವಾಗ ಈ ಅಂಶಗಳನ್ನು ಪರಿಗಣಿಸುವುದಾಗಿ ಭರವಸೆ ನೀಡಿದರು. 
ನಂತರ ಸದನದಲ್ಲಿ ವಿಧೇಯಕವನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು.

SCROLL FOR NEXT