ರಾಜ್ಯ

ಕೊರೋನಾವೈರಸ್ ಕಾರಣ ಅಧಿವೇಶನದ ಅವಧಿ ಮೊಟಕುಗೊಳಿಸಲ್ಲ- ಮುಖ್ಯಮಂತ್ರಿ ಯಡಿಯೂರಪ್ಪ

Nagaraja AB

ಬೆಂಗಳೂರು: ಕೊರೋನಾವೈರಸ್ ಭೀತಿಯ ಹಿನ್ನೆಲೆಯಲ್ಲಿ ಮಾಸಾಂತ್ಯದವರೆಗೂ ನಿಗದಿಯಾಗಿರುವ ವಿಧಾನಸಭಾ ಅಧಿವೇಶನವನ್ನು ಮುಂದೂಡಬೇಕೆಂಬ ಒತ್ತಡಗಳು ಕೇಳಿಬರುತ್ತಿದೆ.ಆದರೆ, ಅಧಿವೇಶನ ನಿಗದಿಯಂತೆ ನಡೆಯಲಿದೆ. ಅಧಿವೇಶನದ ಅವಧಿಯನ್ನು ಮೊಟಕುಗೊಳಿಸಿ ಜನರಿಗೆ ಭೀತಿಯ ಸಂದೇಶವನ್ನು ನಾವು ಕಳುಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭಾನುವಾರ ಸ್ಪಷ್ಪಪಡಿಸಿದರು.

ಇದನ್ನು ತುರ್ತುಪರಿಸ್ಥಿತಿಯ ಸಂದರ್ಭ ಎಂದು ಪರಿಗಣಿಸುವಂತೆ ವಿಧಾನಸಭಾ ಸ್ಪೀಕರ್ , ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದಾಗಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಸರ್ಕಾರ ಎಚ್ಚೆತ್ತುಕೊಂಡು ಅಧಿವೇಶನವನ್ನು ಮುಂದೂಡಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೂಡಾ ಒತ್ತಾಯಿಸಿದ್ದಾರೆ. ಅಧಿವೇಶನ ಸಂದರ್ಭ ಶಾಸಕರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ನೂರಾರು ಜನರು ವಿಧಾನಸೌಧದಲ್ಲಿ ಸೇರುತ್ತಾರೆ. ಕೊರೋನಾವೈರಸ್ ಹರಡದಂತೆ ತಡೆಯಲು ಕೆಲವೊಂದು ಸ್ವಯಂ ನಿರ್ಬಂಧ ಹಾಕಿಕೊಳ್ಳುವುದು ಒಳ್ಳೇಯದು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಸಂಬಂಧ ಇಂದು ನಿರ್ಧರಿಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. 

ಅಧಿವೇಶನ  ಮುಂದೂಡಿಕೆ ಕುರಿತು ಕಾರ್ಯ ಕಲಾಪ ಸಮಿತಿ  ತೀರ್ಮಾನಿಸಬೇಕು. ಅಧಿವೇಶನದಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿದೆ. ಧನ ವಿನಿಯೋಗ ಮಸೂದೆಯನ್ನು ಅಧಿವೇಶನದಲ್ಲಿ ಪಾಸ್ ಮಾಡಬೇಕಾಗಿದೆ. ಇದು ಆಗದೆ ಏಪ್ರಿಲ್ 1 ರಿಂದ ಹಣ ವೆಚ್ಚ ಮಾಡಲು ಆಗದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ ತಿಳಿಸಿದರು. 

ಧನ ವಿನಿಯೋಗ ಮಸೂದೆ ಅಂಗೀಕಾರವಾದ ನಂತರ ಅಧಿವೇಶನವನ್ನು ಮುಂದೂಡಲಾಗುತ್ತದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. 

SCROLL FOR NEXT