ರಾಜ್ಯ

ಚಿಕ್ಕಬಳ್ಳಾಪುರದಲ್ಲಿ ಕೊರೋನಾ ಅಬ್ಬರ: ಗೌರಿಬಿದನೂರಿನಲ್ಲಿ 1 ಸಾವಿರ ಮಂದಿಗೆ ಹೋಂ ಕ್ವಾರಂಟೈನ್

Srinivasamurthy VN

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲೂ ಕೊರೋನಾ ವೈರಸ್ ಅಬ್ಬರ ಹೆಚ್ಚಾಗಿದ್ದು, ವೈರಸ್ ಸೋಂಕಿತರೊಂದಿಗೆ ಸಂಪರ್ಕ ಸಾಧಿಸಿರುವ ಶಂಕೆ ಹಿನ್ನಲೆಯಲ್ಲಿ ಗೌರಿಬಿದನೂರಿನ ಬರೊಬ್ಬರಿ 1 ಸಾವಿರ ಮಂದಿ ನಿವಾಸಿಗಳನ್ನು ಕ್ವಾರಂಟೈನ್ ನಲ್ಲಿಡಲಾಗಿದೆ.

ಗೌರಿಬಿದನೂರಿನಲ್ಲಿ 9 ಮಂದಿಗೆ ಸೋಂಕು ದೃಢವಾಗಿದ್ದು, ಓರ್ವ ವೃದ್ಧೆ ಈಗಾಗಲೇ ಸೋಂಕಿಗೆ ಬಲಿಯಾಗಿದ್ದಾರೆ. ವೈರಸ್ ಸೋಂಕಿತರ ಮನೆಗಳಿರುವ ಹಿರೇಬಿದನೂರಿನ 132 ಮನೆಗಳಲ್ಲಿರುವ 872 ಮಂದಿಯನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು, ತಾಲೂಕಿನ ತೊಂಡೆಬಾವಿ  ಗ್ರಾಮದಲ್ಲೂ ಸಹ 30 ಮನೆಗಳಲ್ಲಿರುವ ಸುಮಾರು 150ಕ್ಕೂ ಹೆಚ್ಚು ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತರ ಮನೆಗಳಿರುವ ಗ್ರಾಮದ ನಿವಾಸಿಗಳನ್ನು ಸಂಪೂರ್ಣವಾಗಿ ಹೋಂ ಕ್ವಾರಂಟೈನ್ ಗೆ ಗುರಿಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈಗಾಗಲೇ ಗೌರಿಬಿದನೂರು ತಾಲೂಕು ಆರೋಗ್ಯಾಧಿಕಾರಿ ರತ್ನಮ್ಮ ನೇತೃತ್ವದಲ್ಲಿ ಮನೆ ಮನೆಗಳಿಗೆ ತೆರಳಿ ಪ್ರತಿಯೊಬ್ಬ ಸದಸ್ಯರಿಗೂ ಕ್ವಾರಂಟೈನ್ ಸ್ಟಾಂಪಿಂಗ್ ಮಾಡಲಾಗುತ್ತಿದೆ. ಈ ಎಲ್ಲಾ ಮನೆಗಳಲ್ಲಿನ ಸದಸ್ಯರು ಯಾರೂ ಕೂಡ ಮನೆಗಳಿಂದ ಹೊರಬರುವಂತಿಲ್ಲ. ಇವರ  ಮನೆಗಳಿಗೆ ಅಗತ್ಯ ಎಲ್ಲಾ ದಿನ ಬಳಕೆ ವಸ್ತುಗಳನ್ನು ದಾನಿಗಳಿಂದ ಪಡೆದು ಮನೆಗಳಿಗೆ ಕಳಿಸಿಕೊಡುವ ಕೆಲಸ ಮಾಡಲಾಗುತ್ತದೆ. ಈಗಾಗಲೇ ಅಗತ್ಯ ದಿನಸಿ ವಸ್ತುಗಳನ್ನ ಸಂಗ್ರಹಿಸಲಾಗಿದ್ದು, ತರಕಾರಿಗಳನ್ನು ಸಹ ಪ್ಯಾಕ್ ಮಾಡಿ ನಾಳೆ ಬೆಳಿಗ್ಗೆಯಿಂದಲೇ ಮನೆ ಮನೆಗಳಿಗೆ ವಿತರಿಸುವ  ಕಾಯಕ ನಡೆಯಲಿದೆ. ಇವರ್ಯಾರು ಕೂಡ ಗೌರಿಬಿದನೂರು ನಗರಕ್ಕೂ ಕೂಡ ಪ್ರವೇಶ ಮಾಡುವಂತಿಲ್ಲ. ಇವರ ಗ್ರಾಮಗಳನ್ನೇ ಸಂಪೂರ್ಣ ಲಾಕ್ ಡೌನ್ ಮಾಡುವ ಮೂಲಕ ಕೊರೊನಾ ವೈರಸ್ ಹರಡದಂತೆ ತಡೆಯಲು ಜಿಲ್ಲಾಡಳಿತ ಹೊಸ ಯೋಜನೆ ರೂಪಿಸಿದೆ.

SCROLL FOR NEXT