ರಾಜ್ಯ

ಪ್ರಯಾಣಿಕರಿಂದ ಹೆಚ್ಚುವರಿಯಾಗಿ ಹಣ ಪಡೆದರೆ ದಂಡ: ಸಾರಿಗೆ ಆಯುಕ್ತರ ಎಚ್ಚರಿಕೆ

Srinivasamurthy VN

ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ಬೆನ್ನಲ್ಲೇ ಸಾರಿಗೆ ಸಂಸ್ಥೆಗಳು ಪ್ರಯಾಣಿಕರಿಂದ ಹೆಚ್ಚುವರಿ ಹಣ ಪಡೆದರೆ ದಂಡ ಹಾಕಲಾಗುತ್ತದೆ ಎಂದು ಸಾರಿಗೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಕೋವಿಡ್-19 ವೈರಸ್ ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಕೆಂಪು ಹೊರತುಪಡಿಸಿ ಉಳಿದ ವಲಯಗಳಲ್ಲಿ ಆಯಾ ಜಿಲ್ಲೆಗಳಿಗೆ ಸಾರ್ವಜನಿಕರ ಪ್ರಯಾಣಕ್ಕಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಹೆಚ್ಚುವರಿ ಶುಲ್ಕ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎನ್.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. 

ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಹೆಚ್ಚು ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ. ಪ್ರಯಾಣಿಕರಿಂದ ಸಾರಿಗೆ ಸಂಸ್ಥೆ ಅಥವಾ ಖಾಸಗಿ ವಾಹನಗಳು ನಿಗದಿತ ದರಕ್ಕಿಂತ ಹೆಚ್ಚು ದರ ವಿಧಿಸಿದ ದೂರುಗಳು ಕಂಡುಬಂದಲ್ಲಿ ಅಂತಹ ವಾಹನಗಳ/ಟ್ರಾವೆಲ್ಸ್ ಸಂಸ್ಥೆಗಳ ಮಾಲೀಕರ ವಿರುದ್ಧ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.

ಕಾನೂನಿನಲ್ಲಿ ಅವಕಾಶವಿಲ್ಲದ ದರಗಳನ್ನು ಪ್ರಯಾಣಿಕರ ಮೇಲೆ ವಿಧಿಸುವ ಬಸ್ಸುಗಳು ಮತ್ತು ಪ್ರಯಾಣಿಕರ ವಾಹನಗಳ ಮೇಲೆ ಪ್ರಕರಣಗಳನ್ನು ದಾಖಲಿಸುವುದಲ್ಲದೆ, ಮೋಟಾರು ವಾಹನಗಳ ಕಾಯ್ದೆಯ ಉಲ್ಲಂಘನೆಗಾಗಿ ರಹದಾರಿಗಳನ್ನು ಅಮಾನತ್ತಿನಲ್ಲಿಡುವ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

SCROLL FOR NEXT