ಬೆಂಗಳೂರು: ಕೊರೋನಾ ವೈರಸ್ ಹಿನ್ನಲೆಯಲ್ಲಿ ಪ್ರತೀ ಭಾನುವಾರ ಕರ್ಫ್ಯೂ ಮಾದರಿಯ ಪೂರ್ಣ ಪ್ರಮಾಣದ ಲಾಕ್'ಡೌನ್ ಜಾರಿಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಮೇ.24ರಂದು ಪೊಲೀಸರು ರಾಜ್ಯದಾದ್ಯಂತ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಿದ್ದಾರೆ.
ಲಾಕ್'ಡೌನ್ 4ನೇ ಹಂತದಲ್ಲಿ ಬಹುತೇಕ ಎಲ್ಲವನ್ನು ಸಡಿಲಿಕೆ ಮಾಡಿದ ಬಳಿಕ ಪ್ರತೀದಿನ ಸಂಜೆ 7ಗಂಟೆಯವರೆಗೆ ಜನಜೀವನ ಬಹುತೇಕ ಮೊದಲಿನ ಸ್ಥಿತಿಗೆ ತಲುಪಿದೆ. ಆದರೆ, ಇದೀಗ ಭಾನುವಾರ ಪೂರ್ಣ ಪ್ರಮಾಣದ ಲಾಕ್'ಡೌನ್ ಅನುಷ್ಠಾನಗೊಳ್ಳಲಿದೆ.
ಅಗತ್ಯ ಸೇವೆಗಳನ್ನು ಹೊರತುಪಡಿಸಿ ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಕರ್ಫ್ಯೂ ಮಾದರಿ ವ್ಯವಸ್ತೆ ಜಾರಿಗೊಳಿಸಲಿದ್ದಾರೆ.
ಜನರ ಸಂಚಾರಕ್ಕೆ ನಿಷೇಧವಿದ್ದು, ಅನಗತ್ಯವಾಗಿ ಓಡಾಡಿದರೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ.
ರಾಜ್ಯ ಒಳಬರುವ ಹಾಗೂ ರಾಜ್ಯದಿಂದ ಹೊರಹೋಗುವ ವಾಹನಗಳಿಗೂ ಬ್ರೇಕ್ ಹಾಕಲಾಗಿದ್ದು, ಆ ದಿನ ನಾಡಿನ ಎಲ್ಲಾ ಗಡಿಗಳನ್ನು ಕೂಡ ಬಂದ್ ಮಾಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾರಿ ಸೆಕ್ಷನ್ 144ರ ಅಡಿಯಲ್ಲಿ ಅಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಲಿದ್ದಾರೆ.