ಬೆಂಗಳೂರು: ಲಾಕ್'ಡೌನ್ 4.0 ಸಡಿಲಗೊಂಡ ಬಳಿಕ ಇದೇ ಮೊದಲ ಬಾರಿಗೆ ಭಾನುವಾರ ಇಡೀ ದಿನ ರಾಜ್ಯದಾದ್ಯಂತ ಪೂರ್ಣ ಪ್ರಮಾಣದ ಲಾಕ್'ಡೌನ್ ಜಾರಿಗೊಂಡಿದೆ. ಅಗತ್ಯ ವಸ್ತುಗಳು ಹಾಗೂ ಸೇವೆಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದ್ದು, ಸಂಚಾರದ ಮೇಲೂ ಸಂಪೂರ್ಣ ನಿಷೇಧ ಹೇರಲಾಗಿದೆ.
ಶನಿವಾರ ಸಂಜೆಯಿಂದ 7 ರಿಂದಲೇ ಲಾಕ್'ಡೌನ್ ಜಾರಿಗೆ ಬಂದಿದ್ದು, ನಾಳೆ ಬೆಳಗ್ಗೆ 7ರವರೆಗೆ ಅಂದರೆ 36 ತಾಸುಗಳ ಕಾಲ ಕರ್ಫ್ಯೂ ಜಾರಿ ಮಾಡಲಾಗಿದೆ.
ವಾರದ ರಜೆಯಾಗಿರುವುದರಿಂದ ಜನರು ಪ್ರಯಾಣ ಮಾಡುವುದು, ವಾಣಿಜ್ಯ ಪ್ರದೇಶ ಸೇರಿದಂತೆ ವಿವಿಧ ಕಡೆ ಸಂಚರಿಸುವುದನ್ನು ನಿಯಂತ್ರಿಸಲು ಸಂಪೂರ್ಣ ಲಾಕ್'ಡೌನ್ ಜಾರಿಗೆ ತರಲಾಗಿದೆ. ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಸಾರಿಗೆ, ಆಟೋ, ಟ್ಯಾಕ್ಸಿ, ರೈಲ್ವೆ ಸೇವೆ, ವಾಣಿಜ್ಯ ಚಟುವಟಿಕೆಗಳಿರುವುದಿಲ್ಲ.
ಖಾಸಗಿ ವಾಹನಗಳ ಸಂಚಾರವನ್ನು ಕೂಡ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ, ಈ ಮೊದಲೇ ನಿಗದಿಯಾಗಿರುವ ವಿವಾಹ ಸಮಾರಂಭಗಳನ್ನು ಷರತ್ತಿನ ಮೇರೆಗೆ ನಡೆಸಲು ಅವಕಾಶ ನೀಡಲಾಗಿದೆ. ಇನ್ನು ಶ್ರಮಿಕ್ ವಿಶೇಷ ರೈಲು ಸಂಚಾರ, ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿದೇಶದಿಂದ ವಿಮಾನಗಳ ಆಗಮನ ಇರಲಿದೆ. ಈ ಹಿಂದೆ ಇದ್ದಂತೆ ಅನೇಕ ಕಡೆ ವಾಹನಗಳ ಸಂಚಾರ ನಿರ್ಬಂಧ, ಏಕಮುಖ ರಸ್ತೆ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ.
ಅನಾವಶ್ಯಕವಾಗಿ ಸಂಚರಿಸುವ ವಾಹನಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಏಕದಿನದ ಲಾಕ್'ಡೌನ್ ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ಎಲ್ಲಾ ಜಿಲ್ಲಾಡಳಿತಗಳು ಮುಂದಾಗಿವೆ.