ರಾಜ್ಯ

ರಾಮನಗರದ 'ಹೆಲ್ತ್ ಸಿಟಿ' ಕಾರ್ಯ ಈ ವರ್ಷವೇ ಆರಂಭ: ಡಾ.ಅಶ್ವತ್ ನಾರಾಯಣ್

Nagaraja AB

ರಾಮನಗರ: ರೇಷ್ಮೆ ನಗರ ಖ್ಯಾತಿಯ ರಾಮನಗರದಲ್ಲಿ ಈ ವರ್ಷದ ಕೊನೆಯೊಳಗೆ 'ಹೆಲ್ತ್‌ ಸಿಟಿ' ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ನಂತರ ಆರೋಗ್ಯ ಸೇವೆಯಲ್ಲಿ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿ ಎನಿಸಿಕೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. 

ರಾಮನಗರ ಜಿಲ್ಲಾ ಆಸ್ಪತೆಗೆ ಶುಕ್ರವಾರ ಭೇಟಿ ನೀಡಿ, ಕೋವಿಡ್  ನಿಯಂತ್ರಣಕ್ಕೆ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ದಾದಿಯರಿಗೆ ಕಿರು ಕಾಣಿಕೆ ನೀಡಿ ಗೌರವಿಸಿದ ಬಳಿಕ ಅವರು ಮಾತನಾಡಿದರು. 

"ರಾಮನಗರವನ್ನು ಹೆಲ್ತ್‌ ಸಿಟಿಯಾಗಿ ಅಭಿವೃದ್ಧಿಪಡಿಸುವ ಕಾರ್ಯ ಈ ವರ್ಷದ ಕೊನೆಯೊಳಗೆ ಆರಂಭವಾಗಲಿದ್ದು, ಅತ್ಯುತ್ತಮ ಆರೋಗ್ಯ ಸೇವೆ ಇಲ್ಲಿ ಲಭ್ಯವಾಗಲಿದೆ. ಜತೆಗೆ, ಜೂನ್‌ ವೇಳೆಗೆ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಆದಷ್ಟು ಬೇಗ ಆರೋಗ್ಯ ಸೇವೆ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು. 

"ಇಡೀ ಜಿಲ್ಲೆಯ ಜನರ ಆರೋಗ್ಯ ಸಮೀಕ್ಷೆ ಮಾಡಿ ಅದರ ಸಂಪೂರ್ಣ ಮಾಹಿತಿಯನ್ನು ಡಿಜಿಟಲ್‌ ವೇದಿಕೆಯಲ್ಲಿ ದಾಖಲಿಸಿರುವ ದೇಶದ ಮೊದಲ ಜಿಲ್ಲೆ ನಮ್ಮ ರಾಮನಗರವಾಗಿದ್ದು, ಕೋವಿಡ್ 19 ವಾರ್‌ ರೂಂನಲ್ಲಿ ಈ ಕುರಿತಂತೆ ರಿಯಲ್‌ ಟೈಮ್‌ ಮಾಹಿತಿ ಲಭ್ಯವಿರುತ್ತದೆ. ಜಿಲ್ಲೆಯ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಇಡೀ ಕುಟುಂಬ ಸದಸ್ಯರ ಆರೋಗ್ಯ ಮಾಹಿತಿ ಕಲೆಹಾಕಿದ್ದಾರೆ. ಈಗ ಇದು ಇತರ ಜಿಲ್ಲೆಗಳಿಗೂ ಮಾದರಿ ಆಗಿದೆ. ಆದರೆ, ಬೇರೆ ಜಿಲ್ಲೆಗಳಲ್ಲಿ ಒಂದು ಸೀಮಿತ ವರ್ಗದವರ ಆರೋಗ್ಯ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು. 

"ಆಸ್ಪತ್ರೆಯಲ್ಲಿರುವ  ಆಕ್ಸಿಜನ್‌ ವ್ಯವಸ್ಥೆ, ಒಟ್ಟು ಹಾಸಿಗೆ ಸಾಮರ್ಥ್ಯ ಇನ್ನಿತರ ಮೂಲ ಸೌಕರ್ಯ, ವೈದ್ಯಕೀಯ ಉಪಕರಣಗಳ ದಾಸ್ತಾನು,  ಔಷಧ ಸಂಗ್ರಹ, ವೈದ್ಯ ಸಿಬ್ಬಂದಿ,  ಆರೋಗ್ಯ ಕಾರ್ಯಕರ್ತರ ಸಂಖ್ಯೆ, ಚಿಕಿತ್ಸೆ ಪಡೆದವರ ಮಾಹಿತಿ ವಾರ್‌ರೂಂನ ಡ್ಯಾಶ್‌ ಬೋರ್ಡ್‌ನಲ್ಲಿ ಲಭ್ಯ. ಜತೆಗೆ, ಜಿಪಿಎಸ್ ತಂತ್ರಜ್ಞಾನದ ನೆರವಿನೊಂದೊಗೆ ಆ್ಯಂಬುಲೆನ್ಸ್‌ ಇರುವ ಸ್ಥಳವನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ  ವಾರ್ ‌ರೂಂನಿಂದಲೇ ತಿಳಿದುಕೊಂಡು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವ ವ್ಯವಸ್ಥೆ ಇಲ್ಲಿದೆ ಎಂದು ತಿಳಿಸಿದರು.

ಕಾರ್ಪೋರೇಟ್  ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಯನ್ನು ಹಲವಾರು ಸಂಸ್ಥೆಗಳು ಸಮರ್ಥವಾಗಿ ನಿಭಾಯಿಸಿದ್ದು, ಜಿಲ್ಲೆಯಲ್ಲಿ ಈ ಎಲ್ಲ ಸೌಕರ್ಯ ಕಲ್ಪಿಸಲು ಸುಮಾರು 2 ಕೋಟಿ ರೂ. ನೆರವು ನೀಡಿವೆ. ಮುಂದೆಯೂ ಅಗತ್ಯ ಸಹಕಾರ ನೀಡುವ ಭರವಸೆ ನೀಡಿವೆ ಎಂದು ತಿಳಿಸಿದರು. 

ವೈದ್ಯ ಸಿಬ್ಬಂದಿಗೆ ಕಾಣಿಕೆ
ಕೋವಿಡ್  ನಿಯಂತ್ರಣಕ್ಕೆ ಸೇವೆ ಸಲ್ಲಿಸಿರುವ ಜಿಲ್ಲೆಯ 212 ದಾದಿಯರಿಗೆ ತಲಾ 1500 ರೂ.ಗಳ ಕಿರು ಕಾಣಿಕೆ ನೀಡಲಾಗಿದೆ. ಜಿಲ್ಲೆಯ ಬಿಜೆಪಿ ಅಧ್ಯಕ್ಷ ರುದ್ರೇಶ್‌ ಅವರು ಇದರ ವ್ಯವಸ್ಥೆ ಮಾಡಿರುವುದು ಗೌರವದ ಕೆಲಸ ಎಂದರು.

SCROLL FOR NEXT