ರಾಜ್ಯ

ಕರ್ನಾಟಕದ ನಿರ್ಮಾಣದ ನಿಟ್ಟಿನಲ್ಲಿ ಸಮಸ್ತ ಕನ್ನಡಿಗರೂ ಒಂದಾಗಿ ಮುನ್ನಡೆಯೋಣ: ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ಸಿಎಂ ಯಡಿಯೂರಪ್ಪ

Manjula VN

ಬೆಂಗಳೂರು: 65ನೇ ಕನ್ನಡ ರಾಜ್ಯೋತ್ಸವ ಹಬ್ಬವನ್ನು ನಾಡಿನೆಲ್ಲೆಡೆ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ, ಸಚಿವರು ಹಾಗೂ ಉನ್ನತ ನಾಯಕರು ಭಾನುವಾರ ಶುಭಾಶಯಗಳನ್ನು ಕೋರಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್'ನಲ್ಲಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ನಾಡಿನ ಸಮಸ್ತ ಜನತೆಗೆ 65ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ಭಾಷೆ, ಸಂಸ್ಕೃತಿಗಳ ರಕ್ಷಣೆಯ ಜೊತೆಗೆ ಸಮೃದ್ಧ, ಆರೋಗ್ಯಪೂರ್ಣ, ಸಹಬಾಳ್ವೆಯ, ಅಭಿವೃದ್ಧಿಶೀಲ ಕರ್ನಾಟಕದ ನಿರ್ಮಾಣದ ನಿಟ್ಟಿನಲ್ಲಿ ಸಮಸ್ತ ಕನ್ನಡಿಗರೂ ಒಂದಾಗಿ ಮುನ್ನಡೆಯೋಣ. ಹಸಿರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ! ಎಂದು ಹೇಳಿದ್ದಾರೆ. 

ಕರುನಾಡ ತಾಯಿ ಸದಾ ಚಿನ್ಮಯಿ! ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಅನ್ನ ಕೋಡೋ ನಮ್ಮ ನಾಡು-ನುಡಿಯ ಕಂಪು ಎಲ್ಲೆಡೆಗೆ ಪಸರಿಸಲಿ ಎಂದು ಉಪ ಮುಖ್ಯಮಂತ್ರಿ ಡಾ.ಸಿಎನ್. ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ. 

ಶಿಕ್ಷಣ  ಸಚಿವ ಸುರೇಶ್ ಕುಮಾರ್ ಅವರು ಟ್ವೀಟ್ ಮಾಡಿ, ನಾಡಿನ ಸಮಸ್ತ ಬಂಧುಗಳಿಗೆ 65 ನೇ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. "ಬಾರಿಸು ಕನ್ನಡ ಡಿಂಡಿಮವಾ ಎಂದು ಹೇಳಿದ್ದಾರೆ. 

ನಾಡಿನ ಸಮಸ್ತ ಜನತೆಗೆ #ಕನ್ನಡರಾಜ್ಯೋತ್ಸವ ದ ಶುಭಾಶಯಗಳು. ಹೆಸರಾಯಿತು ಕನ್ನಡ, ಉಸಿರಾಗಲಿ ಕನ್ನಡ, ಎಲ್ಲರ ನುಡಿಯಾಗಲಿ ಕನ್ನಡ, ಎಲ್ಲರ ನಡೆಯಾಗಲಿ ಕನ್ನಡ ಎಂದು ಸಂಸದೆ ಶೋಭಾ ಕರಂದ್ಲಾಜೆಯವರು ಹೇಳಿದ್ದಾರೆ. 

ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅವರು ಟ್ವೀಟ್ ಮಾಡಿ, ಕನ್ನಡ ನಮ್ಮ ಉಸಿರು, ಕನ್ನಡ ನಮ್ಮ ಗರ್ವ, ಕನ್ನಡ ನಮ್ಮ ದೈವ, ಕನ್ನಡ ನಮ್ಮ ಬದುಕು. ಗಂಧದ ಗುಡಿಯಲ್ಲಿ ಹುಟ್ಟಿ, ಬಾಳಿ, ಬದುಕುವುದೇ ನಮ್ಮ ಪುಣ್ಯ. ಈ ಮಣ್ಣಲ್ಲಿ ಮಡಿದರೇ ಅದು ಭಾಗ್ಯ. ಸಮಸ್ತ ಕನ್ನಡದ ಮನಸುಗಳಿಗೆ ೬೫ ನೇ ರಾಜ್ಯೋತ್ಸವದ ಶುಭಾಶಯಗಳು. ಜೈ ಭುವನೇಶ್ವರಿ ಎಂದು ತಿಳಿಸಿದ್ದಾರೆ. 

SCROLL FOR NEXT