ರಾಜ್ಯದಲ್ಲಿ ಇಳಿಯುತ್ತಿರುವ ಕೊರೋನಾ ಅಬ್ಬರ: ಸತತ 17ನೇ ದಿನವೂ ಸೋಂಕಿತರಿಗಿಂದ ಗುಣಮುಖರಾದವರ ಸಂಖ್ಯೆಯೇ ಹೆಚ್ಚು!
ರಾಜ್ಯದಲ್ಲಿ ಶನಿವಾರ ಕೇವಲ 3,014 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಸತತ 17ನೇ ದಿನವೂ ಸೋಂಕಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿದೆ. ಅಲ್ಲದೆ, ಶನಿವಾರ ಕೇವಲ 28 ಮಂದಿ ಸಾವನ್ನಪ್ಪಿದ್ದು, ಕಳೆದ 6 ತಿಂಗಳುಗಳಲ್ಲಿ ವರದಿಯಾದ ದಿನದ ಕನಿಷ್ಠ ಸಾವು.
ಬೆಂಗಳೂರು: ರಾಜ್ಯದಲ್ಲಿ ಶನಿವಾರ ಕೇವಲ 3,014 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಸತತ 17ನೇ ದಿನವೂ ಸೋಂಕಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿದೆ. ಅಲ್ಲದೆ, ಶನಿವಾರ ಕೇವಲ 28 ಮಂದಿ ಸಾವನ್ನಪ್ಪಿದ್ದು, ಕಳೆದ 6 ತಿಂಗಳುಗಳಲ್ಲಿ ವರದಿಯಾದ ದಿನದ ಕನಿಷ್ಠ ಸಾವು.
ಇನ್ನು ನಿನ್ನೆ ಒಂದೇ ದಿನ ಬರೋಬ್ಬರಿ 20 ಜಿಲ್ಲೆಗಳಲ್ಲಿ ಶೂನ್ಯ ಸಾವು ವರದಿಯಾಗಿದ್ದು, ರಾಜ್ಯದಲ್ಲಿ ಸೋಂಕು ಹಾಗೂ ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ.
ಈ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಸತತ 17ನೇ ದಿನವೂ ಸೋಂಕಿಗಿಂತ ಚೇತರಿಕೆ ಹೆಚ್ಚಾಗಿದ್ದು, ಶನಿವಾರ ಕಳೆದ 180 ದಿನದಲ್ಲೇ ಕನಿಷ್ಠ ಸಾವಿನ ಸಂಖ್ಯೆ ವರದಿಯಾಗಿದೆ. ಒಟ್ಟು ಸೋಂಕಿತರಲ್ಲಿ ಶೇ.91.95ರಷ್ಟು ಮಂದಿ ಈಗಾಗಲೇ ಚೇತರಿಸಿಕೊಂಡಿದ್ದಾರೆ.
ಆರೋಗ್ಯ ಇಲಾಖೆಯು ಶನಿವಾರ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, 3014 ಮಂದಿಗೆ ಸೋಂಕು ತಗುಲಿದ್ದು, 7468 ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 8.23 ಲಕ್ಷಕ್ಕೆ ಏರಿಕೆಯಾಗಿದ್ದು, ಈ ಪೈಕಿ 7.57 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಶನಿವಾರದ 28 ಮಂದಿ ಸೇರಿ 11,168 ಮಂದಿ ಮೃತಪಟ್ಟಿದ್ದು, 55,017 ಮಂದಿ ಸಕ್ರಿಯ ಸೋಂಕಿತರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 956 ಮಂದಿ ಐಸಿಯುವಿನಲ್ಲಿದ್ದಾರೆ.
ಇನ್ನು ಸೋಂಕಿನ ಪಾಸಿಟಿವಿಟಿ ದರವೂ ಕಳೆದ 6 ತಿಂಗಳಲ್ಲೇ ಕನಿಷ್ಟಕ್ಕೆ ಕುಸಿದ್ದೆ. ಶನಿವಾರ 1.01 ಲಕ್ಷ ಪರೀಕ್ಷೆ ನಡೆಸಿದ್ದು, ಶೇ.2.96 ಮಂದಿಗೆ ಮಾತ್ರ ಸೋಂಕು ದೃಢಪಟ್ಟಿದೆ. ಕಳೆದ 7 ದಿನಗಳಲ್ಲಿ ಸೋಂಕು ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆಯೇ ದಾಖಲಾಗಿದೆ. ದೇಶದ ಸರಾಸರಿ ಪಾಸಿಟಿವಿಟಿ ಶೇ.12ಕ್ಕೆ ಹೋಲಿಸಿದರೆ ರಾಜ್ಯದ ಪಾಸಿಟಿವಿಟಿ ದರದಲ್ಲಿ ಗಣನೀಯ ಕುಸಿತ ಕಂಡು ಬಂದಿದ್ದು, ಇದು ಆಶಾದಾಯಕ ಬೆಳವಣಿಗೆ ಎಂದು ತಜ್ಞರು ಅಭಿಪ್ರಾಯುಪಟ್ಟಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.