ರಾಜ್ಯ

ಡ್ರಗ್ಸ್ ಆರೋಪಿಗಳಿಗೆ ನೆರವು ನೀಡಿದ ಆರೋಪ: ಹೆಡ್ ಕಾನ್‌ಸ್ಟೆಬಲ್ ಸಿಸಿಬಿ ವಶಕ್ಕೆ

Raghavendra Adiga

ಬೆಂಗಳೂರು: ಮಾಜಿ ಸಚಿವ ಹಾವೇರಿಯ ರುದ್ರಪ್ಪ ಲಮಾಣಿ ಪುತ್ರ ದರ್ಶನ ಸೇರಿ ಹಲವರು ಭಾಗಿಯಾಗಿದ್ದ ಮಾದಕ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಮುಖ್ಯಪೇದೆ‌ ಪ್ರಭಾಕರ ಅವರನ್ನು ಸಿಸಿಬಿ ಬಂಧಿಸಿದೆ.

ಬಂಧಿತ ಆರೋಪಿಗಳಿಗೆ ಸಹಾಯ ಮಾಡಿದ ಆರೋಪದಡಿ ಸದಾಶಿವನಗರ ಠಾಣೆ ಹೆಡ್ ಕಾನ್‌ಸ್ಟೆಬಲ್ ಪ್ರಭಾಕರ್ ಅವರನ್ನು ವಶಕ್ಕೆ ಪಡೆಯಲಾಗಿದೆ.

ಡಾರ್ಕ್ ನೆಟ್ ಮೂಲಕ ಮಾದಕ ವಸ್ತು ಖರೀದಿಸಿ ಅಂಚೆ ಮೂಲಕ ನಗರಕ್ಕೆ ತರಿಸಿ ಮಾರಾಟ ಮಾಡುತ್ತಿದ್ದ ಆರೋಪದಡಿ ಇತ್ತೀಚೆಗಷ್ಟೇ ಎಂ. ಸುಜಯ್ ಎಂಬುವರನ್ನು ಕೆಂಪೇಗೌಡ ನಗರ ಠಾಣೆ ಪೊಲೀಸರು ಬಂಧಿಸಿ, 500 ಗ್ರಾಂ ಹೈಡ್ರೊ ಗಾಂಜಾ ವಶಕ್ಕೆ ಪಡೆದಿದ್ದರು. ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಮಂತ್ ಮುದ್ದಪ್ಪ, ಪ್ರಸಿದ್ಧ ಶೆಟ್ಟಿ, ಸುನೀಷ್, ದರ್ಶನ್ ಲಮಾಣಿ ಹಾಗೂ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. 

ಪೊಲೀಸರ ತನಿಖಾ ಮಾಹಿತಿಯನ್ನು ಆರೋಪಿಗಳಿಗೆ ಹರಿಬಿಡಲಾಗುತ್ತಿದ್ದ ಆರೋಪ ಪ್ರಭಾಕರ ಮೇಲಿತ್ತು. ಹೀಗಾಗಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.

ಇದೀಗ ಮಾದಕ ವಸ್ತು ಮಾರಾಟಕ್ಕೆ ಸಹಕರಿಸಿದ್ದ ಹಾಗೂ ಆರೋಪಿಗಳಿಗೆ ತನಿಖಾ ಮಾಹಿತಿ ಸೋರಿಕೆ ಮಾಡಿದ್ದ ಆರೋಪದಡಿ ಪ್ರಭಾಕರ್ ಅವರನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

SCROLL FOR NEXT