ರಾಜ್ಯ

ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

Manjula VN

ಬೆಂಗಳೂರು: ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಬ್ಬರೂ ಇಂದು ವಿಧಾನಸಭೆಯ ಸದಸ್ಯರಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಮ್ಮುಖದಲ್ಲಿ ಇಬ್ಬರು ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುನಿರತ್ನ, ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜೇಶ್‍ಗೌಡ ಅವರು ವಿಜಯಶಾಲಿಯಾಗಿದ್ದರು.

ಆರ್ ಆರ್ ನಗರದ ನೂತನ ಶಾಸಕ ಮುನಿರತ್ನ ರಾಜರಾಜೇಶ್ವರಿ ತಾಯಿ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿದರೆ, ಶಿರಾ ಶಾಸಕ ಡಾ. ರಾಜೇಶ್ ಗೌಡ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಮಾಣ ವಚನ ಬೋಧಿಸಿದರು.

ಪ್ರಮಾಣ ವಚನ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರು 2.5 ಲಕ್ಷ ಮತಗಳಿಂದ ಗೆದ್ದಾಗ ಇವಿಎಂ ಸಮಸ್ಯೆ ಆಗಲಿಲ್ಲ. ಈಗ ನಾನು ಗೆದ್ದಾಗ ಇವಿಎಂ ಮೇಲೆ ಸಂದೇಹ. ಅವರು ಗೆದ್ದಾಗ ಇದೇ ಅನುಮಾನ ಬಂದಿದ್ದರೆ ಒಪ್ಪಬಹುದಿತ್ತು ಈಗ್ಯಾಕೆ ಇದೆಲ್ಲಾ ಎಂದು ಡಿ.ಕೆ.ಸುರೇಶ್ ಗೆ ತಿರುಗೇಟು ನೀಡಿದರು. 

SCROLL FOR NEXT