ರಾಜ್ಯ

ಚಾಲಕರನ್ನು ಸುಲಿಯುವ ನಿರ್ದಾಕ್ಷಿಣ್ಯ ಕ್ರಮಕ್ಕೆ ಸರ್ಕಾರ ತಡೆಯೊಡ್ಡಬೇಕು: ಕುಮಾರಸ್ವಾಮಿ

Nagaraja AB

ಬೆಂಗಳೂರು: ಚಾಲಕರನ್ನು ಸುಲಿಯುವ ನಿರ್ದಾಕ್ಷಿಣ್ಯ ಕ್ರಮಕ್ಕೆ ಸರ್ಕಾರ ತಡೆಯೊಡ್ಡಿ ಔದಾರ್ಯ ತೋರುವ ಮೂಲಕ ತುಸು ನೆಮ್ಮದಿ ನೀಡಬೇಕಾದ ತುರ್ತು ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಎಗ್ಗಿಲ್ಲದೆ ದಂಡ ವಸೂಲಿ ಮಾಡುವ ಪೊಲೀಸರ ಕ್ರಮದಿಂದ ಚಾಲಕರು ನಲುಗಿ ಹೋಗಿದ್ದಾರೆ. ಇಂತಹ ಕಡು ಕಷ್ಟ ಕಾಲದಲ್ಲಿ ಸರ್ಕಾರ ಮಾನವೀಯತೆ ಪ್ರದರ್ಶಿಸಬೇಕೆಂದು ಆಗ್ರಹಿಸಿದ್ದಾರೆ.

ಕೋವಿಡ್-19 ವೇಳೆ ಸಂಕಟಕ್ಕೆ ಒಳಗಾಗಿದ್ದ ಚಾಲಕರಿಗೆ 5 ಸಾವಿರ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಸರ್ಕಾರ ಚಾಲಕರ ಮೂಗಿಗೆ ತುಪ್ಪ ಸುರಿಯುವ ಕೆಲಸ ಮಾಡಿತ್ತು. ಆದರೆ, ಅನುಷ್ಠಾನಕ್ಕೆ ಬರಲಿಲ್ಲ. ಚಾಲಕರಿಗೆ ಪರಿಹಾರ ಕೊಡದೆ ಮಾತು ತಪ್ಪಿದ ಸರ್ಕಾರ ಈಗ ದಂಡ ವಸೂಲಿಯ ನೆಪದಲ್ಲಿ ಚಾಲಕರ ಜೀಬಿಗೆ ಕತ್ತರಿ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.

ಪೊಲೀಸರಿಗೆ ದಂಡ ವಸೂಲಿಗೆ ಟಾರ್ಗೆಟ್ ನೀಡಿರುವುದು ಈಗ ಗುಟ್ಟಾಗಿ ಉಳಿದಿಲ್ಲ, ಎಲ್ಲಾ ದಾಖಲಾತಿಗಳನ್ನು ತೋರಿಸಿದರೂ ಒಂದಲ್ಲಾ ಒಂದು ಕಾನೂನು ತಗಾದೆ ತೆಗೆದು ಚಾಲಕರನ್ನು ಹಗಲು ದರೋಡೆ ಮಾಡುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

SCROLL FOR NEXT