ರಾಜ್ಯ

ವಿಧಾನಸೌಧದಲ್ಲಿ ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗಳಿಗೆ ಸರ್ಕಾರ ಸುತ್ತೋಲೆ

Manjula VN

ಬೆಂಗಳೂರು: ಬೀದಿಗಳಲ್ಲಿ ಜನರು ವರ್ತಿಸುವಂತೆ ರಾಜ್ಯದ ಶಕ್ತಿ ಕೇಂದ್ರಗಳಾದ ವಿಧಾನ ಸೌಧ,‌ ವಿಕಾಸ ಸೌಧ ಮತ್ತು ಎಂ.ಎಸ್. ಬಿಲ್ಡಿಂಗ್​ನ ಸಿಬ್ಬಂದಿ ಕೂಡ ಕಟ್ಟಡದ ಮೇಲಿನ ಮಹಡಿಗಳಿಂದ ಕಸ ಎಸೆಯುತ್ತಿದ್ದು, ಇದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಹೀಗಾಗಿ ಇನ್ನು ಮುಂದೆ ವಿಧಾನಸೌಧದಲ್ಲಿರುವ ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗಳಿಗೆ ಸರ್ಕಾರ ಸುತ್ತೋಲೆ ಹೊರಡಿಸಿದೆ. 

ಸಿಬ್ಬಂದಿಗಳಿಗೆ ಎರಡು ಸುತ್ತೋಲೆಗಳನ್ನು ಹೊರಡಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು, ಮೊದಲ ಸುತ್ತೋಲೆಯಲ್ಲಿ ಕಟ್ಟಡದ ಮೇಲಿನ ಮಹಡಿಗಳಿಂದ ಕೆಳಕ್ಕೆ ಕಸ ಎಸೆಯದಂತೆ ಸೂಚಿಸಿದೆ. 

ಕೊರೋನಾ ಸಾಂಕ್ರಾಮಿಕ ರೋಗ ರಾಜ್ಯದಲ್ಲಿ ತಲೆದೋರಿದ್ದು, ಇಂತಹ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡುವುದು ಅತ್ಯಂತ ಮುಖ್ಯವಾಗಿದೆ. ಕೆಲ ಸಿಬ್ಬಂದಿಗಳು ಹೂಗುಚ್ಛ, ಬಾಟಲಿ, ಪ್ಲಾಸ್ಟಿಕ್ ಕಪ್, ಕವರ್ ಸೇರಿದಂತೆ ಇತರೆ ವಸ್ತುಗಳನ್ನು ಕಟ್ಟಡದ ಮೇಲಿನ ಮಹಡಿಗಳಿಂದ ಎಸೆಯುತ್ತಿದ್ದಾರೆ. ಇನ್ನು ಕೆಲವರು ಪಕ್ಷಗಳಿಗಾಗಿ ಕಿಟಕಿಗಳಲ್ಲಿ ಆಹಾರಗಳನ್ನಿಡುತ್ತಿದ್ದಾರೆ. ಇದರಿಂದ ವಿಧಾನಸೌಧದ ಸುತ್ತಮುತ್ತಲಿನ ಸ್ವಚ್ಛತೆ ಹಾಳಾಗುತ್ತಿದೆ. ಅಲ್ಲದೆ, ಇಲಿಗಳು ಹಾಗೂ ಜಿರಳೆಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದೆ. 

ಮತ್ತೊಂದು ಸುತ್ತೋಲೆಯಲ್ಲಿ ಆಯುಧ ಪೂಜೆ ಸಮಯದಲ್ಲಿ ಕಚೇರಿಗಳ ಒಳಗೆ ಮತ್ತು ಕಾರಿಡಾರ್ ಗಳಲ್ಲಿ ರಾಸಾಯನಿಕ ಮಿಶ್ರಿತ ಬಣ್ಣ ಬಳಸುವುದರಿಂದ ಹಾನಿಕಾರಕ ಬಣ್ಣ ನೆಲಹಾಸಿನ ಮೇಲೆ ಬಿದ್ದು ತಿಂಗಳುಗಳ ಕಾಲ ಹಾಗೆಯೇ ನೆಲಹಾಸಿನ ಮೇಲೆ ಅಂಟಿಕೊಳ್ಳುವುದರಿಂದ ನೆಲಹಾಸಿನ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತಿದೆ. ಈ ಕುರಿತು ಹಿಂದೆಯೇ ಸುತ್ತೋಲೆ ಹೊರಡಿಸಿದರೂ ಅನೇಕ ಇಲಾಖೆಗಳು ಪಾಲನೆ ಮಾಡುತ್ತಿಲ್ಲ. ಆಯುಧ ಪೂಜೆ ಸಂದರ್ಭದಲ್ಲಿ ಕುಂಬಳಕಾಯಿಗೆ ರಸಾಯನಿಕಯುಕ್ತ ಬಣ್ಣ ಹಾಗೂ ರಸಾಯನಿಕಯುಕ್ತ ಬಣ್ಣದ ರಂಗೋಲಿಯನ್ನು ಬಳಸದಂತೆ ಸೂಚಿಸಲಾಗಿದೆ. ಅಲ್ಲದೇ ಪೂಜೆಯ ದಿನವೇ ದೀಪಗಳನ್ನು ನಂದಿಸುವಂತೆ ಸೂಚಿಸಿದೆ. 

SCROLL FOR NEXT