ಬೆಂಗಳೂರು: ಇಡೀ ಜಗತ್ತು ಅಫ್ಘಾನಿಸ್ತಾನ ತಾಲಿಬಾನ್ ವಶವಾಗುವುದನ್ನು ಭಯಾತಂಕದಿಂದ ನೋಡುತ್ತಿದೆ. ಈ ಸಮಯದಲ್ಲಿ ಬೆಂಗಳೂತು ಮತ್ತು ಧಾರವಾಡದಲ್ಲಿ ವ್ಯಾಸಂಗ ಮಾಡುತ್ತಿರುವ ಆಫ್ಘನ್ ವಿದ್ಯಾರ್ಥಿಗಳು ತಮ್ಮ ದೇಶಕ್ಕೆ ಒದಗಿರುವ ದುಸ್ಥಿತಿಯನ್ನು ಕಂಡು ಚಿಂತಾಕ್ರಾಂತರಾಗಿದ್ದಾರೆ. ಮುಂದೇನು ಎನ್ನುವ ಭವಿಷ್ಯದ ಯಕ್ಷಪ್ರಶ್ನೆ ಅವರ ಎದುರು ಧುತ್ತನೆ ಪ್ರತ್ಯಕ್ಷಗೊಂಡಿದೆ.
ಈ ಕುರಿತು ಪ್ರಶ್ನಿಸಿದಾಗ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಆಫ್ಘನ್ ವಿದ್ಯಾರ್ಥಿ ಹರೂನ್ 'ನಮ್ಮ ಕುಟುಂಬದ ಸುರಕ್ಷತೆ ಕುರಿತು ತುಂಬಾ ಭಯ ಆಗುತ್ತಿದೆ. ಅಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದೆ. ಹಲವಾರು ಬಾರಿ ಮನೆಗೆ ಕರೆ ಮಾಡಲು ಯತ್ನಿಸಿದೆ. ಆದರೆ ಕರೆ ಹೋಗಲಿಲ್ಲ. ನಂತರ ಇಂಟರ್ನೆಟ್ ಸಹಾಯದಿಂದ ಅವರನ್ನು ಸಂಪರ್ಕಿಸಿದೆ. ಅವರು ತಾವು ಸುರಕ್ಷಿತವಾಗಿರುವುದಾಗಿ ತಿಳಿಸಿದರು. ನನ್ನ ಮನಸ್ಸು ನಿರಾಳವಾಯಿತು.' ಎಂದು ತನ್ನ ಆತಂಕವನ್ನು ಮುಂದಿಟ್ಟಿದ್ದಾನೆ.
ನಗರದಲ್ಲಿ ವ್ಯಾಸಂಗ ಮಾಡುತ್ತಿರುವ ಆಫ್ಘನ್ ವಿದ್ಯಾರ್ಥಿನಿ ತನ್ನ ಹೆಸರನ್ನು ಮಾಧ್ಯಮದ ಮುಂದೆ ಬಹಿರಂಗ ಪಡಿಸಲು ಇಚ್ಛಿಸದೇ ಇದ್ದರೂ ತನ್ನ ದೇಶದ ಪರಿಸ್ಥಿತಿಯನ್ನು ಬಿಚ್ಚಿಟ್ಟಳು. ಕಳೆದ ಹಲ್ವು ವರ್ಷಗಳಿಂದ ಆಫ್ಘನ್ ಪರಿಸ್ಥಿತಿ ಸುಧಾರಿಸಿದ್ದಾಗಿ ಆಕೆ ಅಭಿಪ್ರಾಯಪಟ್ಟಿದ್ದಾಳೆ. ಅಮೆರಿಕ ಸರ್ಕಾರ ಅಫ್ಘಾನಿಸ್ತಾನದಲ್ಲಿ ಸದೃಢ ಸಮಾಜ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿತ್ತು. ಅದಕ್ಕಾಗಿ ಕೋಟ್ಯಂತರ ರೂ.ಗಳನ್ನು ಮೂಲ್ಭೂತ ಸೌಕರ್ಯ ಅಭಿವೃದ್ಧಿಗೆಂದು ವ್ಯಯಿಸಿದೆ ಎಂದು ಆಕೆ ತಿಳಿಸಿದ್ದಾಳೆ. ಆದರೆ ಈಗ ಅವೆಲ್ಲವೂ ವ್ಯರ್ಥವಾಗುತ್ತಿರುವುದರ ಬಗ್ಗೆ ಆಕೆಯೂ ಆತಂಕ ವ್ಯಕ್ತಪಡಿಸಿದ್ದಾಳೆ. ಮುಂಬರುವ ದಿನಗಳಲ್ಲಿ ದೇಶದಲ್ಲಿ ಮಹಿಳೆಯರ ವಿರುದ್ಧ ಯಾವ ಕಠಿಣ ಕಾನೂನು ಜಾರಿಯಾಗುವುದೋ ಎಂದಾಕೆ ಭಯಗ್ರಸ್ಥಳಾಗಿದ್ದಾಳೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ೧೫ ಮಂದಿ ಆಫ್ಘನ್ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚಿಗಷ್ಟೆ ವಿವಿ ಆಡಳಿತ ಮಂಡಳಿ ಆಫ್ಘನ್ ವಿದ್ಯಾರ್ಥಿಗಳೊಡನೆ ಸಮಾಲೋಚನೆ ನಡೆಸಿ ಅವರಿಗೆ ಸಾಂತ್ವನ ಹೇಳಿರುವುದಾಗಿ ತಿಳಿದುಬಂದಿದೆ.