ರಾಜ್ಯ

ಕೋವಿಡ್ 3ನೇ ಅಲೆಗೆ ಸಿದ್ಧತೆ: ಜಿಲ್ಲಾ ಮಟ್ಟದ 'ತಾಂತ್ರಿಕ ತಜ್ಞರ ಸಮಿತಿ' ರಚನೆಗೆ ಸರ್ಕಾರ ಸೂಚನೆ

Manjula VN

ಬೆಂಗಳೂರು: ಸಂಭಾವ್ಯ ಕೊರೋನಾ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ರಾಜ್ಯ ಸರ್ಕಾರ, ಇದರಂತೆ ಜಿಲ್ಲಾ ಮಟ್ಟದಲ್ಲಿ ಕೊರೊನಾ ತಾಂತ್ರಿಕ ತಜ್ಞರ ಸಮಿತಿಯ ರಚನೆ ಮಾಡುವಂತೆ ಅಧಿಸೂಚನೆ ಹೊರಡಿಸಿದೆ. 

ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಈ ಅಧಿಸೂಚನೆಗೆ ಸಹಿ ಹಾಕಿದ್ದಾರೆ.

ರಾಜ್ಯದಲ್ಲಿ ಎರಡು ಕೊರೊನಾ ಅಲೆ ಅನುಭವಗಳೊಂದಿಗೆ ಹಾಗೂ ಅಕ್ಟೋಬರ್- ನವೆಂಬರ್ ತಿಂಗಳಿನಲ್ಲಿ ಕೊರೊನಾ ಮೂರನೇ ಅಲೆ ಸಾಧ್ಯತೆಯ ತಜ್ಞರ ಮಾಹಿತಿ ಮೇರೆಗೆ ರಾಜ್ಯ ತಾಂತ್ರಿಕ ಸಲಹಾ ಸಮಿತಿ ಜಿಲ್ಲಾ ಮಟ್ಟದಲ್ಲಿ ತಜ್ಞರ ಸಮಿತಿಯನ್ನು ರಚಿಸಲು ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ. 

ರಾಜ್ಯ ಮಟ್ಟದಲ್ಲಿ ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಇರುವಂತೆಯೇ ಜಿಲ್ಲಾ ಮಟ್ಟದಲ್ಲಿ ತಾಂತ್ರಿಕ ತಜ್ಞರ ಸಮಿತಿ (ಟಿಇಸಿ) ರಚನೆ ಮಾಡಬೇಕು. ಜಿಲ್ಲಾ ಮಟ್ಟದ ತಜ್ಞರ ಸಮಿತಿಯು ಕೇಂದ್ರ ಸರ್ಕಾರ, ಐಸಿಎಂಆರ್, ಏಮ್ಸ್, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇತರೆ ಸಂಸ್ಥೆಗಳ ಮಾರ್ಗಸೂಚಿಗಳ ಮೇಲೆ ನಿರಂತರವಾಗಿ ನಿಗಾ ವಹಿಸಿ, ಸ್ಥಳೀಯವಾಗಿ ಕೊರೊನಾ ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮಗಳ ಬಗ್ಗೆ ಜಿಲ್ಲಾಡಳಿತಕ್ಕೆ ಸಲಹೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜಿಲ್ಲಾ ಟಿಇಸಿ ಸಮಿತಿಯು ನಿರಂತರವಾಗಿ ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿ ಜೊತೆ ಸಂಪರ್ಕದಲ್ಲಿದ್ದು, ಅದರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಬೇಕು. ಜಿಲ್ಲಾ ಮಟ್ಟದ ಅಂಕಿ-ಅಂಶಗಳನ್ನು ಇತರೆ ಜಿಲ್ಲೆ ಹಾಗೂ ರಾಜ್ಯದ ಸರಾಸರಿಯೊಂದಿಗೆ ತಾಳೆ ನೋಡಿ ಅಗತ್ಯ ಕ್ರಮ ಕೈಗೊಳ್ಳಬೇಕು. ಇದರ ಆಧಾರದ ಮೇಲೆ ಜಿಲ್ಲಾಡಳಿತಕ್ಕೆ ಸೂಕ್ತ ಕ್ರಮಗಳಿಗಾಗಿ ಸಲಹೆ ನೀಡಬಹುದು ಎಂದು ತಿಳಿಸಲಾಗಿದೆ.

ಸಾರ್ವಜನಿಕ ಆರೋಗ್ಯ ವಿಭಾಗದ ಹಿರಿಯ ತಜ್ಞ ವೈದ್ಯರು, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ, ಹಿರಿಯ ಶ್ವಾಸಕೋಶ ತಜ್ಞ, ತೀವ್ರ ನಿಗಾ ತಜ್ಞ, ಮಕ್ಕಳ ವೈದ್ಯರು, ಮೈಕ್ರೋಬಯೋಲಜಿಸ್ಟ್, ಹಿರಿಯ ಆಯುಷ್ ವೈದ್ಯರು ಸದಸ್ಯರಾಗಿರಬೇಕು. ಜತೆಗೆ ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾ ಆರೋಗ್ಯಾಧಿಕಾರಿಗಳು ವಿಶೇಷ ಆಹ್ವಾನಿರಾಗಿ ಇರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಮಿತಿಯು ಕನಿಷ್ಠ ಪ್ರತಿ 15 ದಿನಗಳಿಗೊಮ್ಮೆ ಸಭೆ ಸೇರಬೇಕು. ಅಗತ್ಯ ಬಿದ್ದರೆ ಇನ್ನೂ ತ್ವರಿತಗತಿಯಲ್ಲಿ ಸಭೆಗಳನ್ನು ಸೇರಬೇಕು. ಸಭೆಯ ನಡಾವಳಿ ಹಾಗೂ ಜಿಲ್ಲಾ ಮಟ್ಟದ ಬೆಳವಣಿಗೆಗಳ ಬಗ್ಗೆ ಸಮಿತಿಯು ಕೂಡಲೇ ಮಾಹಿತಿಯನ್ನು ಆರೋಗ್ಯ ಇಲಾಖೆ ಆಯುಕ್ತರು ಹಾಗೂ ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿಗೆ ಕಳುಹಿಸಬೇಕು ಎಂದು ಸೂಚನೆ ನೀಡಲಾಗಿದೆ.

SCROLL FOR NEXT