ರಾಜ್ಯ

ಬೆಳಗಾವಿ ಅಧಿವೇಶನ: ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

Lingaraj Badiger

ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 13 ರಿಂದ ಆರಂಭವಾಗಿದ್ದ ಚಳಿಗಾಲದ ವಿಧಾನಮಂಡಲ ಅಧಿವೇಶನಕ್ಕೆ ಶುಕ್ರವಾರ ತೆರೆ ಬೀಳುತ್ತಿದ್ದು, ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ಮಧ್ಯಾಹ್ನವೇ ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.

ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ಕಾಗೇರಿ, ಬೆಳಗಾವಿ ಅಧಿವೇಶನಕ್ಕೆ ಒಟ್ಟು 8 ಶಾಸಕರು ಗೈರು ಆಗಿದ್ದಾರೆ. ಶೇ. 75 ರಷ್ಟು ಶಾಸಕರು ಕಲಾಪಕ್ಕೆ ಹಾಜರಾಗಿದ್ದರು ಮತ್ತು 5 ಸಾವಿರಕ್ಕೂ ಹೆಚ್ಚು ಜನ ಕಲಾಪ ವೀಕ್ಷಿಸಿದ್ದಾರೆ ಎಂದರು.

ಅಧಿವೇಶನದ ಕೊನೆಯ ದಿನವಾದ ಇಂದು ವಿಧಾನಸಭೆ ಕಲಾಪಕ್ಕೆ ಬೆರಳೆಣಿಕೆಯಷ್ಟು ಶಾಸಕರು ಭಾಗವಹಿಸಿದ್ದರು. ಕೆಲವೊಂದಿಷ್ಟು ಸದಸ್ಯರು ರಜೆ ಪಡೆದುಕೊಂಡಿದ್ದರೆ, ಇನ್ನೊಂದಿಷ್ಟು ಶಾಸಕರು ಕಲಾಪದಿಂದ ದೂರ ಉಳಿದಿದ್ದರು.

10ನೇ ದಿನದ ಕಲಾಪದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಮಾತನಾಡಲು ಅವಕಾಶ ನೀಡುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಹಾಗೂ ಎ.ಎಸ್.ಪಾಟೀಲ್ ನಡಹಳ್ಳಿ ಅವರು ಪಟ್ಟುಹಿಡಿದರು.

ಈ ವೇಳೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಎಲ್ಲರಿಗೂ ಮಾತನಾಡಲು ಅವಕಾಶ ಮಾಡಿ ಕೊಡುತ್ತೇನೆ, ಸಮಯದ ಅಭಾವ ಇದೆ ವೀರಣ್ಣ ಚರಂತಿಮಠ ಮಾತನಾಡಲಿದ್ದಾರೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಷ್ಟೊತ್ತಿಗೆ ಸಭೆ ಮುಕ್ತಾಯ ಆಗುತ್ತದೆ ಎಂದು ಕೇಳಿದರು. ಮಧ್ಯಾಹ್ನ 1:30ಕ್ಕೆ ಮುಕ್ತಾಯವಾಗುತ್ತದೆ ಎಂಬುದು ಸಭಾಧ್ಯಕ್ಷರ ಪ್ರತ್ಯುತ್ತರವಾಗಿತ್ತು.

ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಮಾಡದೆ ಹೋದ್ರೆ ಹೇಗೆ, ಜನ ಏನು ಅನ್ನುತ್ತಾರೆ? ಸಭೆ ಇವತ್ತೇ ಮುಗಿಸೋದು ಮುಖ್ಯ ಅಲ್ಲ. ಚರ್ಚೆ ಮಾಡೋದು ಮುಖ್ಯ. ಸಾಯಂಕಾಲದವರೆಗೆ ಕಲಾಪ ನಡೆಯಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ. ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ಹೋಗಬೇಕಿದೆ ಎಂದು ಹೇಳಿ ಸ್ಪೀಕರ್ ಕಾಗೇರಿ ಅವರು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

SCROLL FOR NEXT