ರಾಜ್ಯ

ಪರಿಷತ್ ಕಲಾಪ ಮುಂದೂಡಿಕೆ: ಮುಂದಿನ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ಮಂಡಿಸಲು ಸರ್ಕಾರ ನಿರ್ಧಾರ

Nagaraja AB

ಬೆಳಗಾವಿ: ಮತಾಂತರ ನಿಷೇಧ ಮಸೂದೆಯನ್ನು ಸರ್ಕಾರ ಇಂದು ವಿಧಾನಪರಿಷತ್ ನಲ್ಲಿ ಮಂಡಿಸಿಲ್ಲ. ಮುಂದಿನ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಿದ್ದು, ಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. 

ವಿಧಾನಸಭೆಯಲ್ಲಿ ಗುರುವಾರ ಮತಾಂತರ ನಿಷೇಧ ವಿಧೇಯಕ ಅಂಗೀಕಾರಗೊಂಡಿತ್ತು. ಆದರೆ, ಮೇಲ್ಮನೆಯಲ್ಲಿ ಸಂಖ್ಯಾ ಬಲ ಕೊರತೆ ಕಾರಣಕ್ಕೆ ಈ ವಿಧೇಯಕ ಮಂಡಿಸದೇ ಇರಲು ಸರ್ಕಾರ ನಿರ್ಧರಿಸಿತು.

ಸಂಜೆ ಐದು ನಿಮಿಷಗಳ ವಿರಾಮದ ಬಳಿಕ ವಿಧಾನಪರಿಷತ್ ಕಲಾಪ ಮತ್ತೆ ಆರಂಭಗೊಂಡಾಗ ಸಭಾಪತಿ ಕೊಠಡಿಯಲ್ಲಿ ನಡೆದ ತೀರ್ಮಾನದಂತೆ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆ ಮಸೂದೆ ಮಂಡನೆ ಕೈ ಬಿಟ್ಟಿರುವುದಾಗಿ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದರು. ಮುಂದಿನ ಅಧಿವೇಶನದಲ್ಲಿ ಮಂಡಿಸುವುದಾಗಿ ಘೋಷಿಸಿದರು. 

ಇದಕ್ಕೂ ಮುನ್ನ ಮಧ್ಯಾಹ್ನ ಭೋಜನ ವಿರಾಮದ ನಂತರ ಸರ್ಕಾರ ಮಸೂದೆ ಮಂಡಿಸಬಹುದು, ಚರ್ಚೆ ಪ್ರಕ್ರಿಯೆ ಆರಂಭವಾಗುತ್ತದೆ ಎಂಬ ವಿರೋಧಪಕ್ಷದವರ ನಿರೀಕ್ಷೆ ಹುಸಿಯಾಯಿತು. ಭೋಜನ ವಿರಾಮದ ಬಳಿಕ ಪರಿಷತ್ ಕಲಾಪ ಆರಂಭಗೊಂಡರೂ ಮಸೂದೆ ಮಂಡನೆಯಾಗಲಿಲ್ಲ. ಮಸೂದೆ ಮೇಲೆ ಚರ್ಚೆಗೆ ಅವಕಾಶ ಕೊಡಬೇಕು, ಸದಸ್ಯತ್ವ ಅವಧಿ ಮುಗಿದ ಸದಸ್ಯರಿಗೆ ವಿದಾಯ ಭಾಷಣ ಮಾಡಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಪರಿಷತ್ ಮುಖ್ಯ ಸಚೇತಕ ನಾರಾಯಣ ಸ್ವಾಮಿ ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಐದು ನಿಮಿಷ ಬರುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಪೀಠದಿಂದ ತೆರಳಿದರು. ಪೀಠಕ್ಕೆ ಬಂದ ಉಪ ಸಭಾಪತಿ ಪ್ರಾಣೇಶ್, ವಿಪಕ್ಷ ನಾಯಕ ಎಸ್. ಆರ್. ಪಾಟೀಲ್ ಅವರಿಗೆ ವಿದಾಯ ಭಾಷಣ ಮಾಡಲು ಅವಕಾಶ ನೀಡಿದರು. ಇವರ ಮಾತಿನ ನಂತರ ಉಪ ಸಭಾಪತಿ ಅವರು ಅನಿರ್ದಿಷ್ಟಾವಧಿಗೆ ಸದನ ಮುಂದೂಡಲ್ಪಟ್ಟಿದೆ ಎಂದು ಘೋಷಿಸಿದರು.

SCROLL FOR NEXT