ರಾಜ್ಯ

ಕೋವಿಡ್ ಮೃತರ ಕುಟುಂಬಗಳಿಗೆ ಒಬ್ಬ ಸಚಿವರೂ ಭೇಟಿ ನೀಡಿಲ್ಲ; ಹೆಣಗಳ ರಾಶಿಯ ಫೋಟೋಗಳು ಮನಕಲಕುತ್ತವೆ: ಡಿ.ಕೆ. ಶಿವಕುಮಾರ್

Sumana Upadhyaya

ಬೆಂಗಳೂರು: ರಾಜ್ಯದ ಜನತೆ ಕೊರೋನಾ ಮಹಾಮಾರಿಯಿಂದ ತತ್ತರಿಸಿ ಹೋಗಿದ್ದಾರೆ. ಅನೇಕ ಮಂದಿ ಬಡವರು, ನಿರ್ಗತಿಕರು, ಕೆಳ ಮಧ್ಯಮ ವರ್ಗದವರು ಮೃತಪಟ್ಟಿದ್ದಾರೆ. ಅಂತವರ ಮನೆಗಳಿಗೆ ಒಬ್ಬರ ಮನೆಗೂ ಸರ್ಕಾರದ ಯಾವೊಬ್ಬ ಸಚಿವರೂ ಭೇಟಿ ಮಾಡಿಲ್ಲ. ಭೇಟಿ ನೀಡಿ ಸಾಂತ್ವನ ಹೇಳಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ.

ಅವರು ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಎರಡು ತಿಂಗಳ ಹಿಂದೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 36 ಕುಟುಂಬಗಳ ಸದಸ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ 28 ಕುಟುಂಬಗಳ ಸದಸ್ಯರನ್ನು ನಾನು ಭೇಟಿ ಮಾಡಿ ಬಂದಿದ್ದೇನೆ. ಅವರೆಲ್ಲರ ಕಷ್ಟದ ಕರುಣಾಜನಕ ಸ್ಥಿತಿ ನೋಡಿ ಮನಸ್ಸಿಗೆ ನೋವಾಯಿತು. ಸರ್ಕಾರದ, ಸಚಿವರುಗಳ ನಿರ್ಲಕ್ಷ್ಯತನದಿಂದ, ಬೇಜವಾಬ್ದಾರಿತನದಿಂದ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದರು.

ಆಸ್ಪತ್ರೆಯಲ್ಲಿ ಜನರು ಪ್ರಾಣಿಗಳಂತೆ ಸಾಯುತ್ತಿದ್ದಾರೆ, ಹೆಣಗಳ ರಾಶಿಯ ಫೋಟೋಗಳು ನನ್ನ ಬಳಿ ಇವೆ, ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು, ವೈದ್ಯಕೀಯ ಸೌಲಭ್ಯಗಳಿಗೆ ಕೊರತೆಯಿದೆ. ರಾತ್ರಿ ಪಾಳಿಯಲ್ಲಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಸಾಕಷ್ಟು ವೈದ್ಯರು, ದಾದಿಯರು ಇರುವುದಿಲ್ಲ, ಈ ಬಗ್ಗೆ ಸರ್ಕಾರವೇಕೆ ಗಮನ ಹರಿಸುತ್ತಿಲ್ಲ ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯ ಒಂದು ಕೊಠಡಿಯಲ್ಲಿ 14ರಿಂದ 15 ಮಂದಿ ಸೋಂಕಿತರನ್ನು ತುಂಬಿದ್ದಾರೆ. ಹಲವು ರೋಗಿಗಳು ಮೃತಪಟ್ಟಿದ್ದಾರೆ. ಮೃತಪಟ್ಟ ಕೂಡಲೇ ಅಲ್ಲಿ ಮತ್ತೆ ರೋಗಿಗಳನ್ನು ತುಂಬಿದ್ದಾರೆ. ಹೆಣದ ರಾಶಿಯ ಫೋಟೋಗಳು ನಮ್ಮ ಬಳಿ ಇವೆ. ಆದರೆ ಅದನ್ನು ಬಹಿರಂಗವಾಗಿ ಪ್ರದರ್ಶಿಸುವುದಿಲ್ಲ. ಕೊರೋನಾ ಎರಡನೇ ಅಲೆಯಲ್ಲಿ ಮೃತಪಟ್ಟವರಲ್ಲಿ ಬಹುತೇಕರು ಯುವಕರು, ಮಹಿಳೆಯರು, ಮಧ್ಯವಯಸ್ಸಿನವರಿದ್ದಾರೆ, ಆದರೆ ಇವ್ಯಾವುದರ ಬಗ್ಗೆ ಸರ್ಕಾರದ ಜನಪ್ರತಿನಿಧಿಗಳಿಗೆ ಬೇಸರವಿಲ್ಲ, ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳುವುದರಲ್ಲಿ, ರಾಜಕೀಯ ಮಾಡುವುದರಲ್ಲಿಯೇ ತೊಡಗಿದ್ದಾರೆ ಎಂದು ಆರೋಪಿಸಿದರು.

SCROLL FOR NEXT