ರಾಜ್ಯ

ಆರ್‌ಟಿಐ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ: ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

Manjula VN

ಬೆಂಗಳೂರು: ಆರ್‌ಟಿಐ ಕಾರ್ಯಕರ್ತ ವೆಂಕಟೇಶ್ ಅಲಿಯಾಸ್ ಮಾಮಯ್ಯ ಅವರ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣ ಸಂಬಂಧ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. 

ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಪಟ್ಟಣದ ನಿವಾಸಿ, ಆರ್ಟಿಐ ಕಾರ್ಯಕರ್ತ ವೆಂಕಟೇಶ್ ಎಂಬುವವರ ಮೇಲೆ ಗುರುವಾರ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಮಾರಕಾಸ್ತ್ರಗಳೊಂದಿಗೆ ದಾಳಿ ಮಾಡಿದ್ದ ದುಷ್ಕರ್ಮಿಗಳು ವೆಂಕಟೇಶ್ ಅವರ ಬಲಗೈ ಹಾಗೂ ಬಲ ಕಾಲನ್ನು ಕತ್ತರಿಸಿದ್ದರು, ಪರಾರಿಯಾಗಿದ್ದರು. 

ವೆಂಕಟೇಶ್ ಅವರು ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೆಂಕಟೇಶ್ ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡುತ್ತಿರುವ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರ ಸಮೇತ ಯಾರೊಬ್ಬರಿಗೂ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ತಿಳಿದುಬಂದಿದೆ. 

ಈ ನಡುವೆ ಘಟನೆ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿ, ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ದಾಳಿ ನಡೆದ ಸ್ಥಳದಲ್ಲಿ ಸಿಸಿಟಿವಿಗಳ ಪರಿಶೀಲನೆ ನಡೆಸಲಾಗಿದ್ದು, ಆರೋಪಿಗಳ ಚಲನವಲನಗಳು ಪತ್ತೆಯಾಗಿವೆ. ಹಲ್ಲೆ ನಡೆಸಿದ್ದವರ ಕುರಿತು ಮಾಹಿತಿ ಕಲೆಹಾಕಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗುತ್ತದೆ. ದಾಳಿಗೆ ಸಹಾಯ ಮಾಡಿದ್ದವರನ್ನೂ ಈಗಾಗಲೇ ವಿಚಾರಣೆಗೊಳಪಡಿಸಲಾಗಿದೆ ಎಂದು ಹೇಳಿದ್ದಾರೆ. 

ಇನ್ನು ಪ್ರಕರಣ ಸಂಬಂಧ ಪೊಲೀಸರು ವೆಂಕಟೇಶ್ ಅವರ ಪತ್ನಿ ನಾಗರತ್ನ ಹಾಗೂ ಅವರ ಪುತ್ರ ಜೀವನ್ ಗೌಡ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಹೇಳಿಕೆ ವೇಳೆ ಕೆಲವರ ಕುರಿತು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಒಂದೊಂದು ಪೊಲೀಸರ ತಂಡವನ್ನು ರವಾನಿಸಲಾಗಿದೆ. ಹಣಕಾಸು ವಿಚಾರಕ್ಕೆ ದಾಳಿ ನಡೆದಿರುವ ಸಾಧ್ಯತೆಗಳಿದ್ದು, ಸಂಬಂಧಿಕರೇ ದಾಳಿ ನಡೆಸಿರುವ ಶಂಕೆಗಳು ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ. 

SCROLL FOR NEXT