ರಾಜ್ಯ

ಕರ್ನಾಟಕ ಲಾಕ್ ಡೌನ್; ಬಾರ್​ಗಳಲ್ಲಿ ಪಾರ್ಸೆಲ್​ಗೆ ಅವಕಾಶ, ಸಿನಿಮಾ, ಧಾರಾವಾಹಿ ಚಿತ್ರೀಕರಣಕ್ಕಿಲ್ಲ ಅವಕಾಶ; ಇಲ್ಲಿದೆ ಸಂಪೂರ್ಣ ಮಾರ್ಗಸೂಚಿ

Srinivasamurthy VN

ಬೆಂಗಳೂರು: ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಸಂಪೂರ್ಣ ಲಾಕ್ ಡೌನ್ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ಮಾರ್ಗ ಸೂಚಿ ಬಿಡುಗಡೆ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರ ಸಂಪೂರ್ಣ ಲಾಕ್​ಡೌನ್ ಜಾರಿ ಮಾಡಿದ್ದು, ಮೇ.10 ರಿಂದ ಮೇ.24ರ ತನಕ ರಾಜ್ಯ ಸಂಪೂರ್ಣ ಸ್ತಬ್ಧವಾಗಲಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೆ ಯಾವ ಸೌಲಭ್ಯಗಳೂ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲಸ ಅರಸಿ  ಬಂದಿರುವ ಜನರು ಮತ್ತು ಇತ್ತರರು ತಮ್ಮ ಊರುಗಳಿಗೆ ಹಿಂದುರಗಬಹುದೇ ಎಂಬ ಪ್ರಶ್ನೆಗೆ ಸರ್ಕಾರ ಸ್ಪಷ್ಟನೆ ನೀಡಿದ್ದು, ಲಾಕ್ ಡೌನ್ ಅವಧಿಯಲ್ಲಿ ರಾಜ್ಯದಲ್ಲಿ ಎಲ್ಲ ರೀತಿಯ ಸಾರಿಗೆ ಸೇವೆಗಳು ಬಂದ್ ಆಗಿರಲಿವೆ. ಹೋಟೆಲ್, ಪಬ್, ಬಾರ್‌, ಕೈಗಾರಿಕೆ ಎಲ್ಲವೂ ಸ್ಥಗಿತಗೊಳ್ಳಲಿದ್ದು, ಟ್ಯಾಕ್ಸಿ, ಆಟೋ, ಕ್ಯಾಬ್​ಗಳಿಗೆ  ತುರ್ತು ಸೇವೆಗೆ ಮಾತ್ರ ಅವಕಾಶವಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10 ಗಂಟೆಗೆ ಅವಕಾಶವಿದೆ. ಬೆಳಗ್ಗೆ 10 ಗಂಟೆಯ ನಂತರ ಒಬ್ಬನೇ ಒಬ್ಬ ವ್ಯಕ್ತಿಯೂ ರಸ್ತೆಗೆ ಇಳಿಯುವಂತಿಲ್ಲ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. 

ಮಾರ್ಗಸೂಚಿ ಬಿಡುಗಡೆ ಮಾಡಿದ ಮುಖ್ಯ ಕಾರ್ಯದರ್ಶಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ಮಾರ್ಗ ಸೂಚಿ ಬಿಡುಗಡೆ ಮಾಡಿದ್ದು, ಅಗತ್ಯ ವಸ್ತುಗಳ ಖರೀದಿಗೆ ಸಮಯಾವಕಾಶ ನಿಗದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮಾರ್ಗಸೂಚಿಯಲ್ಲಿನ ಪ್ರಮುಖಾಂಶಗಳು ಇಂತಿವೆ.

ಈಗಾಗಲೇ ನಿಗದಿಪಡಿಸಿರುವ ರೈಲು ಹಾಗೂ ವಿಮಾನ ಸೇವೆ ಲಭ್ಯವಿರಲಿದೆ. ಅಗತ್ಯ ದಾಖಲೆಗಳನ್ನು ತೋರಿಸಿ ಪ್ರಯಾಣಿಸಬಹುದು. ಮೆಟ್ರೋ ರೈಲು ಸೇವೆಗೆ ನಿರ್ಬಂಧ ಹೇರಲಾಗಿದೆ. ಆಟೋ, ಕ್ಯಾಬ್ ಗೆ ತುರ್ತು ಬಳಕೆಗೆ ಮಾತ್ರ ಅವಕಾಶ ನೀಡಲಾಗಿದ್ದು, ಶಾಲೆ, ಕಾಲೇಜು, ತರಬೇತಿ ಶಾಲೆಗಳು, ಟ್ಯೂಷನ್  ಗಳು ಮುಚ್ಚಲ್ಪಟ್ಟಿರುತ್ತವೆ. ಆನ್‌ಲೈನ್‌ ಕ್ಲಾಸ್‌ಗೆ ಅವಕಾಶವಿದ್ದು, ಹೋಟೆಲ್, ರೆಸ್ಟೋರೆಂಟ್‌ಗಳು ಬಂದ್ ಇರುತ್ತವೆ. ಆದರೆ ಪಾರ್ಸಲ್‌ಗೆ ಮಾತ್ರ ಅವಕಾಶ ಇರುತ್ತದೆ.

ಇನ್ನು ಮಾಲ್ ಗಳು, ಚಿತ್ರಮಂದಿರಗಳು, ಉದ್ಯಾನಗಳು, ಬಾರ್ ಗಳು ಮತ್ತು ಪಬ್ ಗಳು, ಮನರಂಜನಾ ಪಾರ್ಕ್‌ಗಳು ಮುಚ್ಚಲ್ಪಡುತ್ತವೆ. ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅವಕಾಶ ಇಲ್ಲ. ಈಗಾಗಲೇ ನಿಗದಿಯಾಗಿರುವ ಮದುವೆಗಳಿಗೆ ಅವಕಾಶ ನೀಡಲಾಗಿದ್ದು, ಮದುವೆಯಲ್ಲಿ ಕೇವಲ 50 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಂತ್ಯಕ್ರಿಯೆಗೆ 5 ಜನಕ್ಕೆ ಅವಕಾಶ ನೀಡಲಾಗಿದೆ. 

ಪೋಲೀಸ್, ಹೋಮ್ ಗಾರ್ಡ್, ಅಗ್ನಿಶಾಮಕ, ಬಂಧಿಖಾನೆ, ನೈಸರ್ಕಿಗ ವಿಕೋಪ ನಿರ್ವಹಣಆ ದಳ ಸೇರಿದಂತೆ ತುರ್ತು ಸೇವೆಗಳಿಗೆ ಅವಕಾಶ ನೀಡಲಾಗಿದೆ. ವಿದ್ಯುತ್, ನೀರು, ಆರೋಗ್ಯ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ.  ಗೂಡ್ಸ್ ವಾಹನಗಳನ್ನು ಬಿಟ್ಟು ಬೇರೆ ವಾಹನಗಳಿಗೆ ಅವಕಾಶ ಇಲ್ಲ. ಜನ ವಾಹನಗಳನ್ನು ತೆಗೆದುಕೊಂಡು ಆಹಾರ ಪಾರ್ಸಲ್ ತರುವ ಹಾಗಿಲ್ಲ. ತುರ್ತು ಅವಶ್ಯಕತೆಗಳಿಗೆ ಹತ್ತಿರದ ಸ್ಥಳಕ್ಕೆ ನಡೆದುಕೊಂಡು ಹೋಗಿ ತರಬೇಕು. ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಕೆಲಸ ನಿರ್ವಹಿಸುತ್ತವೆ.

ಜಿಲ್ಲೆಯಿಂದ ಜಿಲ್ಲೆಗೆ ಓಡಾಟ ಇರುವುದಿಲ್ಲ. ಇ ಕಾಮರ್ಸ್ ಮುಖಾಂತರ ಪಾರ್ಸಲ್ ತರುವುದಕ್ಕೆ ಅವಕಾಶ ನೀಡಲಾಗಿದ್ದು, ಕೈಗಾರಿಕೆ, ಕಟ್ಟಡ ನಿರ್ಮಾಣ ಚಟುವಟಿಕೆಗೆ ಹೊರಗಿನಿಂದ ಜನ ಕರೆದುಕೊಂಡು ಬರುವ ಹಾಗಿಲ್ಲ, ಅಲ್ಲಿಯೇ ಇರುವ ಸಿಬ್ಬಂದಿಯೊಡನೆ ಕೆಲಸ ಮಾಡಿಸಬೇಕು. ಈ ನಿಯಮ ಗಾರ್ಮೆಂಟ್  ಸೆಕ್ಟರ್‌ಗೂ ಅನ್ವಯವಾಗುತ್ತದೆ. ಕೃಷಿ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ. ಕೃಷಿ ಸಂಬಂಧಿ ಅಂಗಡಿಗಳ ತೆರೆಯಲು ಬೆಳಗ್ಗೆ 6ರಿಂದ 10ರವರೆಗೂ ಅವಕಾಶ ನೀಡಲಾಗಿದೆ. 

ಲಸಿಕೆ ಹಾಕಿಸಿಕೊಳ್ಳಲು ತೆರಳುವವರಿಗೆ ಅನುಮತಿ ಇದೆ. ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಲಾಗಿದ್ದು, ದಿನ ನಿತ್ಯ ವಸ್ತುಗಳಾದ ಹಣ್ಣು ಮತ್ತು ತರಕಾರಿಗೆ ಬೆಳಗ್ಗೆ 6 ರಿಂದೆ 10 ಗಂಟೆಯವರೆಗೆ ಮಾತ್ರ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ಹಾಲಿನ ಬೂತ್‌ ತೆರೆಯಲು ಸಂಜೆವರೆಗೂ  ಅವಕಾಶ ನೀಡಲಾಗಿದೆ. ಸರ್ಕಾರಿ ಕಚೇರಿ ಭಾಗಶಃ ಕೆಲಸ ನಿರ್ವಹಿಸುತ್ತವೆ. ಕಟ್ಟಡ ಕಾಮಗಾರಿಗೆ ಯಾವುದೇ ಅಡ್ಡಿ.ಇಲ್ಲ ಅಗತ್ಯ ವಸ್ತು ಸಾಗಿಸುವ ವಾಹನಗಳಿಗೆ ಅಡ್ಡಿ ಇಲ್ಲ. ಕೂಲಿ ಕಾರ್ಮಿಕರು ಬೆಂಗಳೂರು ಬಿಟ್ಟು ಹೋಗಬಾರದು. ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಕಾಮಗಾರಿಗಳು ನಡೆಯಬಹುದು. ತಳ್ಳುವ  ಗಾಡಿ, ತರಕಾರಿ ಮಾರಲು ಅವಕಾಶ ನೀಡಲಾಗಿದೆ. 

ಮಂದಿರ, ಮಸೀದಿ, ಚರ್ಚ್ ಬಂದ್ ಆಗಿರಲಿದ್ದು, ಮಂದಿರ, ಮಸೀದಿ, ಚರ್ಚ್​ಗಳಲ್ಲಿ ಪೂಜೆ ಪುನಸ್ಕಾರ ಇರಲಿದೆ. ಮೆಟ್ರೋ ರೈಲಿಗೆ ಅವಕಾಶ ಇಲ್ಲ. ಆದರೆ ವಿಮಾನ ಮತ್ತು ರೈಲುಗಳಲ್ಲಿ ಸಂಚಾರ ನಡೆಸಲು ಅವಕಾಶವಿದೆ.  
 
ಒಳಾಂಗಣ ಚಿತ್ರೀಕರಣಕ್ಕೂ ಇಲ್ಲ ಅವಕಾಶ
ಲಾಕ್​ಡೌನ್​ ವೇಳೆ ಧಾರಾವಾಹಿ ಹಾಗೂ ಸಿನಿಮಾ ಶೂಟಿಂಗ್​ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಈ ಬಾರಿ ಒಳಾಂಗಣ ಶೂಟಿಂಗ್​ಗೆ ಯಾವುದೇ ಅವಕಾಶ ಇರುವುದಿಲ್ಲ. ಇದರಿಂದ ಒಳಾಂಗಣದಲ್ಲಿ ಶೂಟಿಂಗ್​ ಮಾಡುತ್ತಿರುವವರು ಈಗಲೇ ಶೂಟಿಂಗ್​ ನಿಲ್ಲಿಸಬೇಕಾಗಬಹುದು.
 

SCROLL FOR NEXT