ರಾಜ್ಯ

ಕೋವಿಡ್-19: ರಾಜ್ಯದಲ್ಲಿ ಒಂದೇ ದಿನ 35,879 ಮಂದಿ ಡಿಸ್ಚಾರ್ಜ್

Manjula VN

ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವಂತೆಯೇ ಇತ್ತ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ದಾಖಲೆ ಮಟ್ಟದಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ.

ಹೌದು.. ಇಂದು ಒಂದೇ ದಿನ ರಾಜ್ಯಾದ್ಯಂತ ಬರೊಬ್ಬರಿ 35,879 ಮಂದಿ ಸೋಂಕಿತರು ಗುಣಮುಖರಾಗಿದ್ದು, ಇದು ರಾಜ್ಯದಲ್ಲಿ ಒಂದು ದಿನದ ಗರಿಷ್ಠ ಸೋಂಕಿತರ ಗುಣಮುಖವಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 35,879 ಮಂದಿ ಗುಣಮುಖರಾಗಿದ್ದು, ಆ ಮೂಲಕ  ರಾಜ್ಯದಲ್ಲಿ ಸೋಂಕಿನಿಂದ ಚೇತರಿಸಿಕೊಂಡವರ ಪ್ರಮಾಣ ಶೇ.70.90ಕ್ಕೆ ಏರಿಕೆಯಾಗಿದೆ. 

ರಾಜ್ಯದಲ್ಲಿ ಮೇ ತಿಂಗಳಿನಲ್ಲಿ ಚೇತರಿಕೆ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಮೇ 8 ರಂದು 34,881 ಮಂದಿ ಗುಣಮುಖರಾಗಿದ್ದರು. ಮೇ 12 ರಂದು 34,752 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದರು. ಇದರೊಂದಿಗೆ ರಾಜ್ಯದಲ್ಲಿ ಈ ವರೆಗೂ ಚೇತರಿಸಿಕೊಂಡವರ ಸಂಖ್ಯೆ 15 ಲಕ್ಷ ಗಡಿ ದಾಟಿ 15,10,557ಕ್ಕೆ ತಲುಪಿದೆ. 

ಈ ನಡುವೆ ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 373 ಮಂದಿ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸಾವಿನ ಪ್ರಮಾಣ ಏರಿಕೆಯಾಗಿದೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 21 ಸಾವಿರ ಗಡಿ ದಾಟಿ 21,085ಕ್ಕೆ ಏರಿಕೆಯಾಗಿದೆ. ಆದರೂ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ.1ಕ್ಕಿಂತ ಕಡಿಮೆಯಿದ್ದು ಶೇ.0.98ರಷ್ಟಿದೆ ಎಂದು ತಿಳಿದುಬಂದಿದೆ. ಇನ್ನು ರಾಜಧಾನಿ ಬೆಂಗಳೂರು ರಾಜ್ಯದಲ್ಲಿಯೇ ಅತೀ ಹೆಚ್ಚು ಸಾವಿನ 9,246 ಪ್ರಕರಣಗಳನ್ನು ಹೊಂದಿದ್ದು, ಪ್ರಸ್ತುತ ರಾಜ್ಯ ರಾಜಧಾನಿಯ ಸಾವಿನ ಪ್ರಮಾಣ ಶೇ.0.89ರಷ್ಟಿದೆ. 

ರಾಜ್ಯದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 5,98,605ಕ್ಕೆ ತಲುಪಿದ್ದು, ಬಂಮಗಳೂರಿನಲ್ಲಿ 3,60,862ರಷ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

SCROLL FOR NEXT