ರಾಜ್ಯ

ರೂ.11 ಸಾವಿರ ಕೋಟಿ ಜಿಎಸ್‍ಟಿ ಬಾಕಿ ಬಿಡುಗಡೆ ಮಾಡಿ: ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ

Manjula VN

ಬೆಂಗಳೂರು: ರಾಜ್ಯ ಸರಕಾರಕ್ಕೆ ಕೇಂದ್ರದಿಂದ ಬರಬೇಕಾಗಿರುವ ಜಿಎಸ್‍ಟಿ ಪರಿಹಾರ ನಷ್ಟದ ಬಾಕಿ ಮೊತ್ತ ರೂ.11 ಸಾವಿರ ಕೋಟಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಜಿಎಸ್ಟಿ ಮಂಡಳಿಯ ರಾಜ್ಯ ಪ್ರತಿನಿಧಿ ಹಾಗೂ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಎಂರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ. 

ಶುಕ್ರವಾರ ನಡೆದ ಜಿಎಸ್ಟಿ ಮಂಡಳಿಯ 43ನೆ ಸಭೆಯಲ್ಲಿ ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಬಸವರಾಜ ಬೊಮ್ಮಾಯಿಯವರು ಮಾತನಾಡಿದರು.

2021-22ನೆ ಸಾಲಿನ ಜಿಎಸ್ಟಿ ಪರಿಹಾರದ ನಷ್ಟದ ಹಣವನ್ನು ಕೇಂದ್ರ ಸರಕಾರವೇ ಸಾಲ ಪಡೆದು ರಾಜ್ಯಕ್ಕೆ ನೀಡಬೇಕು. 2020- 21ನೇ ಸಾಲಿನಲ್ಲಿ ರಾಜ್ಯಕ್ಕೆ ಬರಬೇಕಾಗಿರುವ ರೂ. 11 ಸಾವಿರ ಕೋಟಿ ಪರಿಹಾರವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಜಿಎಸ್ಟಿ ಪರಿಹಾರ ಸೆಸ್‍ನಲ್ಲಿಯೂ ಬಾಕಿ ಉಳಿದಿರುವ ಹಣವನ್ನು ರಾಜ್ಯಕ್ಕೆ ಬಿಡುಗಡೆ ಮಾಡಬೇಕು. ಜಿಎಸ್ಟಿ ನಷ್ಟ ಪರಿಹಾರ ಒದಗಿಸುವ ಸೌಲಭ್ಯ 2021- 2022ಕ್ಕೆ ಮುಕ್ತಾಯಗೊಳ್ಳಲಿದೆ. ಆದರೆ, 2021- 2022ರ ನಂತರವೂ ಜಿಎಸ್'ಟಿ ನಷ್ಟ ಪರಿಹಾರ ಸೌಲಭ್ಯವನ್ನು ಮುಂದುವರಿಸುವ ಕುರಿತು ಚರ್ಚೆ ನಡೆಯಬೇಕು ಎಂದು ಅವರು ಒತ್ತಾಯ ಮಾಡಿದರು.

ಇದೇ ವೇಳೆ ದೇಶಾದ್ಯಂತ ಕೊರೋನಾ ವೈರಸ್ ಎರಡನೇ ಅಲೆಯ ಸಾಂಕ್ರಾಮಿಕದಿಂದ ತತ್ತರಿಸಿರುವ ಎಲ್ಲಾ ರಾಜ್ಯಗಳು ಅಗತ್ಯ ಸೇವೆಯಾದ ಕೋವಿಡ್- 19 ಔಷಧ ಸೇರಿದಂತೆ ವೈದ್ಯಕೀಯ ಪರಿಕರಗಳು ಹಾಗೂ ಆರೋಗ್ಯ ಸೇವೆಗಳ ಮೇಲಿನ ಜಿಎಸ್​ಟಿ ದರವನ್ನು ಕಡಿತಗೊಳಿಸುವಂತೆ ಮನವಿ ಮಾಡಿದವು.

SCROLL FOR NEXT