ರಾಜ್ಯ

ಮನೆಬಾಗಿಲಿಗೇ ಸರ್ಕಾರದ ಸೇವೆ: ಪಿಂಚಣಿ ಕೈಯಲ್ಲಿ ಹಿಡಿದು ನಿಂತ ಬೊಮ್ಮಾಯಿ, ಸಿಎಂ ಕಂಡು ವೃದ್ಧ ಮಹಿಳೆ ದಿಗ್ಭ್ರಮೆ!

Manjula VN

ಬೆಂಗಳೂರು: ಸರ್ಕಾರ ನೀಡುವ ಸೇವೆಗಳೂ ನಿಮ್ಮ ಕೈ ಸೇರದೆ ಹಲವು ವರ್ಷಗಳಿಂದ ಓಡಾಡಿ, ಸಾಕಾಗಿ ಸುಮ್ಮನಿರುವಾಗ ಇದ್ದಕ್ಕಿದ್ದಂತೆ ನಿಮ್ಮ ಸೇವೆಯನ್ನು ಕೈಯಲ್ಲಿ ಹಿಡಿದು ನಿಮ್ಮ ಬಾಗಿಲಿಗೆ ಸ್ವತಃ ಮುಖ್ಯಮಂತ್ರಿಗಳೇ ಬಂದು ನಿಂತರೆ ನಿಮ್ಮ ಪರಿಸ್ಥಿತಿ ಹೇಗಾಗಬೇಡ... ಇದೇ ರೀತಿಯ ಘಟನೆಯೊಂದು ಮಲ್ಲೇಶ್ವರಂನ ಪ್ಯಾಲೆಸ್ ಗುಟ್ಟಹಳ್ಳಿಯಲ್ಲಿರುವ ವೃದ್ಧ ಮಹಿಳೆಯೊಬ್ಬರ ಜೀವನದಲ್ಲಿ ನಡೆದಿದೆ.

75 ವರ್ಷದ ವೃದ್ಧ ಮಹಿಳೆ ಮಲ್ಲಿಕಾ ಅವರು ಹಲವು ವರ್ಷಗಳ ಹಿಂದೆಯೇ ತಮಿಳುನಾಡಿನಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನಗರದಲ ಮಲ್ಲೇಶ್ವರಂನ ಪ್ಯಾಲೆಸ್ ಗುಟ್ಟಹಳ್ಳಿಯಲ್ಲಿ ಸಣ್ಣ ಮನೆಯೊಂದರಲ್ಲಿ ಮಲ್ಲಿಕಾ ಅವರು ವಾಸವಿದ್ದು, ಆಗಾಗ ಅವರ ಪುತ್ರ ಮನೆ ಖರ್ಚಿಗೆ ಹಣವನ್ನು ನೀಡುತ್ತಿದ್ದು, ಅಕ್ಕಪಕ್ಕದ ಮನೆಯವರು ನೀಡುವ ಊಟದಿಂದ ಜೀವನ ಸಾಗಿಸುತ್ತಿದ್ದಾರೆ.

ನಿನ್ನೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯದ ಜನಸಾಮಾನ್ಯರ ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವ ಜನಸೇವಕ ಮತ್ತು ಏಕೀಕೃತ ಸಾರ್ವಜನಿಕ ಕುಂದು ಕೊರತೆ ನಿವಾರಣೆ ಮಾಡುವ ಜನಸ್ಪಂದನ ಯೋಜನೆಗಳಿಗೆ ಚಾಲನೆ ನೀಡಿದರು.

ಯೋಜನೆಯಡಿಯಲ್ಲಿ ಮುಖ್ಯಮಂತ್ರಿಗಳು ನಿನ್ನೆ ಕೆಲವು ಆಯ್ದ ಮನೆಗಳಿಗೆ ಭೇಟಿ ನೀಡಿದ್ದು, ಈ ವೇಳೆ ವಸತಿ ಪ್ರಮಾಣಪತ್ರ, ಆದಾಯ ಮತ್ತು ಜಾತಿ ಪ್ರಮಾಣಪತ್ರ, ಖಾತಾ, ವಿಧವಾ ಪಿಂಚಣಿ, ಕಾರ್ಮಿಕ ಕಾರ್ಡ್, ಹಿರಿಯ ನಾಗರಿಕ ಕಾರ್ಡ್, ಆಧಾರ್ ಕಾರ್ಡ್, ಆಯುಷ್ಮಾನ್ ಆರೋಗ್ಯ ಕಾರ್ಡ್ ಮತ್ತು ಇತರ ದಾಖಲೆಗಳನ್ನು ವಿತರಿಸಿದರು.

ಮನೆಗಳಿಗೆ ಭೇಟಿ ನೀಡುತ್ತಿದ್ದ ಮುಖ್ಯಮಂತ್ರಿಗಳು ಇದೇ ವೇಳೆ 75 ವರ್ಷದ ಮಲ್ಲಿಕಾ ಅವರ ಮನೆ ಬಾಗಿಲಿಗೆ ಪಿಂಚಣಿ ಹಣವನ್ನು ಹಿಡಿದು ತೆರಳಿದ್ದರು.

ಮನೆ ಬಾಗಿಲು ತಟ್ಟುತ್ತಿದ್ದಂತೆಯೇ ಬಾಗಿಲು ತೆರೆದ ಮಲ್ಲಿಕಾ ಅವರು, ಬಾಗಿಲ ಬಳಿ ನಿಂತಿದ್ದ ಮುಖ್ಯಮಂತ್ರಿಗಳನ್ನು ಕಂಡು ದಿಗ್ಭಾಂತರಾಗಿದ್ದಾರೆ.

2 ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದೆ. ಆದರೆ, ಅರ್ಜಿ ತಿರಸ್ಕೃತಗೊಂಡಿತ್ತು. ಇದೀಗ ಮುಖ್ಯಮಂತ್ರಿಗಳಿಂದಲೇ ಪಿಂಚಣಿ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಇದನ್ನು ಎಂದಿಗೂ ಮರೆಯುವುದಿಲ್ಲ. ಮುಖ್ಯಮಂತ್ರಿಗಳನ್ನು ನೋಡಿದ ಕೂಡಲೇ ಮಾತನಾಡಲು ನಾಲಿಗೆಯೇ ಹೊರಡಲಿಲ್ಲ. ಮುಖ್ಯಮಂತ್ರಿಗಳೇ ನನ್ನ ಆಶೀರ್ವಾದ ಪಡೆದುಕೊಂಡರು. ಬಹಳ ಸಂತೋಷವಾಗುತ್ತಿದೆ ಎಂದು ಮಲ್ಲಿಕಾ ಅವರು ಹೇಳಿದ್ದಾರೆ.

ಹಿರಿಯ ನಾಗರಿಕರ ಕಾರ್ಡ್‌ಗಳನ್ನು ಪಡೆದ ನಾಸೀರ್ (74) ಹಾಗೂ ಆಸ್ಮಾತುನಿಸ್ಸಾ (68) ಎಂಬುವವರು ಮಾತನಾಡಿ, ಬೆಳಿಗ್ಗೆಯೇ ಸಿದ್ಧರಾಗಿ, ಮುಖ್ಯಮಂತ್ರಿಗಳ ಆಗಮನಕ್ಕಾಗಿ ಕಾದು ಕುಳಿತಿದ್ದೆವು. ನಿಗದಿಯಂತೆಯೇ ಮುಖ್ಯಮಂತ್ರಿಗಳು ಮನೆಗೆ ಬಂದರು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದ್ದ ಸಮಯದಲ್ಲಿ ಎರಡು ರಸ್ತೆಗಳಲ್ಲಿದ್ದ ಮನೆಗಳಿಗೆ ಮಾತ್ರ ಮುಖ್ಯಮಂತ್ರಿಗಳು ಭೇಟಿ ನೀಡಿದ್ದರು. ಈ ವೇಳೆ ಮುಖ್ಯಮಂತ್ರಿಗಳು ಸಮೋಸಾ ಹಾಗೂ ಕಾಫಿಯನ್ನು ಸವಿದರು.

SCROLL FOR NEXT