ರಾಯಚೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನಡೆದ ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಮಾಜಿ ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲಾಗಿದೆ.
ದಲಿತರ ಕುರಿತು ಅವಳನೇಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ರಾಯಚೂರಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ಘೋಷಣೆ ಕೂಗುತ್ತಿದ್ದ ಪ್ರತಿಭಟನಾಕಾರರು ಸಿದ್ದರಾಮಯ್ಯ ಅವರ ಪ್ರತಿಕೃತಿ ದಹಿಸಲು ಮುಂದಾಗಿದ್ದರು. ಆದರೆ, ಪೊಲೀಸರು ಪ್ರತಿಕೃತಿ ದಹಿಸಲು ಅವಕಾಶ ನೀಡಲಿಲ್ಲ. ಆಗ ಮಾಜಿ ಶಾಸಕ ಪಾಪಾರೆಡ್ಡಿ ಮತ್ತು ಪ್ರತಿಭಟನಾನಿರತರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ.
ಆ ವೇಳೆ ಪ್ರತಿಕೃತಿಯನ್ನು ಪೊಲೀಸ್ ಸಿಬ್ಬಂದಿ ಎತ್ತಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಆಗ ಪಾಪಾರೆಡ್ಡಿ ಪೊಲೀಸ್ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪೊಲೀಸರು ಪ್ರತಿಕೃತಿಗೆ ಬೆಂಕಿ ಹಚ್ಚುವುದನ್ನು ತಡೆಯಲು ಮುಂದಾದರೂ ಕೊನೆಗೂ ಪ್ರತಿಕೃತಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.
ಮಾಜಿ ಶಾಸಕನ ವಿರುದ್ಧ ಪ್ರಕರಣ ದಾಖಲು
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಪೊಲೀಸರು ಮಾಜಿ ಬಿಜೆಪಿ ಶಾಸಕ ಪಾಪರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹಾನಗಲ್ ಬಿಜೆಪಿ ಸೋಲು, ಸಿಎಂ ಬೊಮ್ಮಾಯಿ ಅವರ ಸೋಲು; JDSಗೆ ಠೇವಣಿ ಕೂಡ ಸಿಗಲ್ಲ ಎಂದು ಮೊದಲೇ ಹೇಳಿದ್ದೆ; ಸಿದ್ದರಾಮಯ್ಯ
ಈ ಬಗ್ಗೆ ರಾಯಚೂರು ಎಸ್ ಪಿ ನಿಖಿಲ್ ಬಿ ಅವರು ಮಾಹಿತಿ ನೀಡಿದ್ದು, ಬುಧವಾರ ಸಿವಿಲ್ ಡ್ರೆಸ್ ನಲ್ಲಿದ್ದ ಕಾನ್‌ಸ್ಟೆಬಲ್ ರಾಘವೇಂದ್ರ ಮೇಲೆ ಪಾಪರೆಡ್ಡಿ ಕಪಾಳಮೋಕ್ಷ ಮಾಡಿರುವ ವಿಡಿಯೋ ಸಾಕ್ಷ್ಯವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಅದರ ಅಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.