ರಾಜ್ಯ

ಬೈಪಾಸ್ ರಸ್ತೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ; ಭೂಮಿ ನೀಡಲು ರೈತರ ವಿರೋಧ; ಬೆಳಗಾವಿ ಧಗಧಗ!

Shilpa D

ಬೆಳಗಾವಿ: ಬೆಳಗಾವಿಯ ಬೈಪಾಸ್ ರಸ್ತೆ ಕಾಮಗಾರಿ ವಿರೋಧಿಸಿ ಪ್ರತಿಭಟನಾನಿರತ ಹಲಗಾ-ಮಚ್ಚೆ ಗ್ರಾಮದ ರೈತರ ಮೇಲೆ ಪೊಲೀಸರು ದಬ್ಬಾಳಿಕೆ ಮಾಡಿದ ಘಟನೆ ನಡೆದಿದೆ.

ಸರ್ಕಾರ ಮತ್ತು ಅಧಿಕಾರಿಗಳು ರೈತರಿಗೆ ಮೋಸ ಮಾಡಿ ರೈತರ ಕಣ್ತಪ್ಪಿಸಿ ಫಲವತ್ತಾದ ಭೂಮಿಯನ್ನು ಕಾಮಗಾರಿಗೆ ಸ್ವಾಧೀನ ಮಾಡಿಕೊಂಡಿದ್ದಾರೆ. ಹೀಗಾಗಿ ತಾವು ಪ್ರಾಣ ಹೋದರೂ ರಸ್ತೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು  ರೈತರು ಪಟ್ಟು ಹಿಡಿದ್ದಿದ್ದರು.

ಗುತ್ತಿಗೆದಾರರು ಅಕ್ರಮವಾಗಿ ದಬ್ಬಾಳಿಕೆ ಮಾಡಿ ರೈತರ ಜಮೀನುಗಳನ್ನುಅತಿಕ್ರಮಿಸಿ ಹಲಗಾ ಮಚ್ಚೆ ಬೈಪಾಸ್ ರಸ್ತೆಯನ್ನು ನಿರ್ಮಿಸುತ್ತಿದ್ದಾರೆಂದು ಆರೋಪಿಸಿ ಬುಧವಾರದಿಂದ ರೈತರು ನಡೆಸುತ್ತಿದ್ದ ಪ್ರತಿಭಟನೆ ಈಗ ಹಿಂಸಾತ್ಮಕ ರೂಪ ತಾಳಿದೆ. ಆಕಾಶ್ ಅಂಗೋಲ್ಕರ್ ಎಂಬ ರೈತನೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಗಂಭೀರ ಸ್ಥಿತಿಯಲ್ಲಿ ಇರುವ ರೈತನನ್ನು ಆಂಬುಲೆನ್ಸ್‌ ಮೂಲಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮತ್ತೋರ್ವ ರೈತ ಕುಡುಗೋಲಿನಿಂದ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸ್ಥಳದಲ್ಲಿ ನಡೆದಿದೆ.

ಸರಕಾರ ಮತ್ತು ಅಧಿಕಾರಿಗಳು ರೈತರಿಗೆ ಮೋಸ ಮಾಡಿ ರೈತರ ಕಣ್ತಪ್ಪಿಸಿ ಫಲವತ್ತಾದ ಭೂಮಿಯನ್ನು ಕಾಮಗಾರಿಗೆ ಸ್ವಾಧೀನ ಮಾಡಿಕೊಂಡಿದ್ದಾರೆ. ಮಾತ್ರವಲ್ಲದೆ ಮಚ್ಚೆ ಬೈಪಾಸ್ ಕಾಮಗಾರಿಗಾಗಿ ಭೂ ಸ್ವಾಧೀನ ಮಾಡಿಕೊಂಡಿದ್ದು, ಪರಿಹಾರ ನೀಡಲು ಅಧಿಕಾರಿಗಳು ಕಮೀಷನ್ ಕೇಳುತ್ತಿದ್ದಾರೆನ್ನುವ ಗಂಭೀರ ಆರೋಪವನ್ನು ಮಾಡಲಾಗಿತ್ತು. ಭೂಮಿ ‌ಕಳೆದುಕೊಂಡ ತಮಗೆ ಪರಿಹಾರ ನೀಡಲು ಅಧಿಕಾರಿಗಳು ಲಕ್ಷಾಂತರ ರೂ. ಕಮೀಷನ್ ಕೇಳುತ್ತಿರೋದಾಗಿ ಜಿಲ್ಲಾಧಿಕಾರಿಗಳ ಮುಂದೆ ರೈತರು ತಮ್ಮ ಅಳಲು ತೋಡಿಕೊಂಡಿದ್ದರು. ವಶಪಡಿಸಿಕೊಳ್ಳಲಾದ ರೈತರ ಭೂಮಿಗೆ 57 ಲಕ್ಷ ರೂ. ಪರಿಹಾರ‌ ನೀಡಲು 11 ಲಕ್ಷ ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳ ಸಮ್ಮುಖದಲ್ಲೇ ಸಂತ್ರಸ್ತ ರೈತರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.

ಈವರೆಗೆ ಸರ್ವೆಯಲ್ಲಿ ತಮ್ಮ ಜಮೀನು ಇರಲಿಲ್ಲ. ಏಕಾಏಕಿ ತಮ್ಮ ಜಮೀನನ್ನು ರಸ್ತೆ ಕಾಮಗಾರಿಯಲ್ಲಿ ಸೇರಿಕೋಂಡಿದೆ ಎಂದು ಆರೋಪಿಸಿ ರೈತರು ಇಂದು ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ನೂರಾರು ಪೊಲೀಸರನ್ನು ಕರೆತಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಮಗಾರಿ ನಡೆಸಿತ್ತು. ಆದರೆ ರೈತರು ಕಾಮಗಾರಿಗೆ ಅಡ್ಡಿಪಡಿಸಿ ಆಕ್ರೋಶ ಹೊರಹಾಕಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಪುಟ್ಟ ಮಕ್ಕಳೊಂದಿಗೆ ಬಂದ ಮಹಿಳೆಯರನ್ನು ಪೊಲೀಸರು ಎಳೆದಾಡಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ನಮ್ಮ ಬಳಿ ಮೂರು ಎಕರೆ ಫಲವತ್ತಾದ ಭೂಮಿ ಇದೆ, ಅದನ್ನು ಯಾವುದೇ ಪರಿಸ್ಥಿತಿಯಲ್ಲಿ ರಸ್ತೆ ಕಾಮಗಾರಿಗೆ ಬಿಡುವುದಿಲ್ಲ. ನನ್ನ ಜಮೀನಿನ ವಾಸ್ತವ ಮಾರುಕಟ್ಟೆ ಬೆಲೆ ಎಕರೆಗೆ 8 ಲಕ್ಷ ರೂ.ಗಳಾಗಿದೆ, ಆದರೆ  ಸರ್ಕಾರ ಎಕರೆಗೆ 1.5 ಲಕ್ಷ ರೂ.  ನೀಡುತ್ತಿದೆ,  ನನಗೆ ಹಣವೂ ಬೇಡ,  ನನ್ನ ಭೂಮಿಯನ್ನು ಮಾರಲು ಬಯಸುವುದಿಲ್ಲ. ಎರಡು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ, ನಮ್ಮ ಕುಟುಂಬವು ಕೇವಲ ಒಂದು ಎಕರೆಯಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಅಮಿತ್ ಆಂಗೋಳ್ಕರ್ ಎಂಬ ರೈತ ಹೇಳಿದ್ದಾರೆ. ಭೂಮಿ ನೀಡಲು ವಿರೋಧಿಸಿದ್ದ ಇವರು ಮರ ಹತ್ತಿ ಮೇಲಿಂದ ಬಿದ್ದು ಸಾಯುವುದಾಗಿ ಬೆದರಿಕೆ ಹಾಕಿದ್ದರು.

SCROLL FOR NEXT