ರಾಜ್ಯ

ಡಿಸೆಂಬರ್ ಅಂತ್ಯಕ್ಕೆ ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ ಕಾರ್ಯಾರಂಭ- ಸಚಿವ ಡಾ. ನಾರಾಯಣಗೌಡ 

Nagaraja AB

ಬೆಂಗಳೂರು: ಕರ್ನಾಟಕ ರೇಷ್ಮೆ ಮಾರುಕಟ್ಟೆ ವಿಸ್ತರಣೆ ಸಂಬಂಧ ಉತ್ತರ ಪ್ರದೇಶದ  ವಾರಣಾಸಿಗೆ ಕೈಗೊಂಡಿದ್ದ ಪ್ರವಾಸ ಫಲಪ್ರದವಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.

ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ ಸ್ಥಾಪಿಸುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಗೆ ಉತ್ತರ ಪ್ರದೇಶ ಸರ್ಕಾರ ತಕ್ಷಣ ಸ್ಪಂದಿಸಿದೆ. ವಾರಣಾಸಿಯ ಸಾರಂಗ್ ತಲಾಬ್ ನಲ್ಲಿ ಜಾಗ ನೀಡಿದ್ದು, ಅಲ್ಲಿ ಮಳಿಗೆ ತೆಗೆದು ರೇಷ್ಮೆ ಮಾರುಕಟ್ಟೆ ಆರಂಭಿಸಲು ಒಪ್ಪಿಗೆ ಸೂಚಿಸಿದೆ. ಶೀಘ್ರದಲ್ಲೇ ಯುುಪಿ ಸರ್ಕಾರ, ಎನ್ ಹೆಚ್ ಡಿಸಿ ಹಾಗೂ ರಾಜ್ಯ ಸರ್ಕಾರದ ನಡುವೆ ಪರಸ್ಪರ ತಿಳುವಳಿಕೆ ಒಪ್ಪಂದ (MOU) ಮಾಡಿಕೊಳ್ಳಲಾಗುತ್ತದೆ. ಒಡಂಬಡಿಕೆ ಪ್ರಕ್ರಿಯೆಗಳು ಪೂರ್ಣವಾದ ಕೂಡಲೇ ಅಗತ್ಯವಿರುವ ಕಾಮಗಾರಿ ಪೂರ್ಣಗೊಳಿಸಿ, ಡಿಸೆಂಬರ್ ಅಂತ್ಯದೊಳಗೆ  ಮಾರುಕಟ್ಟೆ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ರೇಷ್ಮೆ ಉತ್ಪಾದನೆ ಹೆಚ್ಚಿಸಲು ಕರ್ನಾಟಕ ಸರ್ಕಾರದ ರೇಷ್ಮೆ ಇಲಾಖೆ ಸಿದ್ಧಪಡಿಸಿದ್ದ ವರದಿ ಸಲ್ಲಿಸಲಾಯಿತು. ಕರ್ನಾಟಕದಲ್ಲಿ ಬಳಸುತ್ತಿರುವ ತಂತ್ರಜ್ಞಾನ, ರೈತರಿಗೆ ನೀಡುತ್ತಿರುವ ಸೌಲಭ್ಯಗಳು, ಮಾರುಕಟ್ಟೆ ವ್ಯವಸ್ಥೆ ಹಾಗೂ ರೇಷ್ಮೆಯಿಂದ ಉತ್ಪಾದಿಸಲಾಗುತ್ತಿರುವ ಉಪ ಉತ್ಪನ್ನಗಳ ಬಗ್ಗೆಯೂ ತಿಳಿಸಿಕೊಡಲಾಯಿತು. ಅಲ್ಲದೇ,. ಉತ್ತರ ಪ್ರದೇಶದಲ್ಲಿ ರೇಷ್ಮೆ ಉತ್ಪಾದನೆ ಹೆಚ್ಚಿಸಲು ಅಗತ್ಯವಿರುವ ತಂತ್ರಜ್ಞಾನ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡುವುದಾಗಿ ನಾರಾಯಣಗೌಡ ತಿಳಿಸಿದ್ದಾರೆ.

ಬನರಾಸ್ ಸೀರೆ ನೇಯ್ಗೆಗೆ ಅಗತ್ಯವಿರುವ ಗುಣಮಟ್ಟದ ರೇಷ್ಮೆ ಪೂರೈಸಲು ಕೆಎಸ್ ಎಂಬಿ ಸಿದ್ಧವಿದೆ. ಈ ಬಗ್ಗೆ ಉತ್ತರ ಪ್ರದೇಶ ಅಧಿಕಾರಿಗಳ ಜೊತೆಗೆ ಉತ್ತಮವಾದ ಸಭೆಯಾಗಿದ್ದು, ತಕ್ಷಣವೇ ಮಾರುಕಟ್ಟೆಗೆ ಜಾಗ ಗುರುತಿಸಿದ್ದಾರೆ. ಎಂಒಯು ಸೇರಿದಂತೆ ಎಲ್ಲಾ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಡಿಸೆಂಬರ್ ಅಂತ್ಯದೊಳಗೆ ಕರ್ನಾಟಕ ಮಾರುಕಟ್ಟೆ ಆರಂಭಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಡಾ.ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SCROLL FOR NEXT