ರಾಜ್ಯ

ಸಾರ್ವಜನಿಕ ಶೌಚಾಲಯ ದುರಸ್ಥಿಗೆ ಒತ್ತಾಯ: ಗದಗ್ ನಗರಸಭೆ ಕಚೇರಿಯಲ್ಲಿ ಮೂತ್ರ ವಿಸರ್ಜಿಸಿ ಪ್ರತಿಭಟನೆ!

Nagaraja AB

ಗದಗ್: ಸಾರ್ವಜನಿಕ ಶೌಚಾಲಯವನ್ನು ದುರಸ್ಥಿ ಮಾಡಬೇಕೆಂದು ಒತ್ತಾಯಿಸಿ ಶ್ರೀರಾಮ ಸೇನೆಯ ಸುಮಾರು 15 ಸದಸ್ಯರು ಮಂಗಳವಾರ ಬೆಳಗ್ಗೆ ಗದಗ ಬೆಟಗೇರಿ ನಗರಸಭೆ ಕಚೇರಿ ಆವರಣದಲ್ಲಿ ಮೂತ್ರ ವಿಸರ್ಜನೆ ಮೂಲಕ  ಪ್ರತಿಭಟನೆ ನಡೆಸಿದರು.

ಸಾರ್ವಜನಿಕ ಶೌಚಾಲಯ ದುರಸ್ತಿ ಮಾಡದಿದ್ದರೆ ಕಚೇರಿ ಆವರಣದಲ್ಲಿ ಮೂತ್ರ ವಿಸರ್ಜನೆ ಮೂಲಕ ಪ್ರತಿಭಟನೆ ಮಾಡುವುದಾಗಿ ಒಂದು ವಾರದ ಹಿಂದೆಯೇ ಗದಗ ಬೆಟಗೇರಿ ನಗರಸಭೆಗೆ ಮನವಿ ಪತ್ರ ಸಲ್ಲಿಸಿದ್ದರು. ಆದರೆ, ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಕಚೇರಿಯ ವಿವಿಧ ಕಡೆಗಳಲ್ಲಿ ಮೂತ್ರ ವಿಸರ್ಜಿಸಿದರು. 

ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು ಆದರೂ ಅವರನ್ನು ತಡೆಗಟ್ಟಲು ಸಾಧ್ಯವಾಗಲಿಲ್ಲಯ ಇನ್ನೂ 8-10 ದಿನಗಳಲ್ಲಿ ಶೌಚಾಲಯಗಳನ್ನು ದುರಸ್ಥಿ ಮಾಡದಿದ್ದಲ್ಲಿ ಜಿಲ್ಲಾಧಿಕಾರಿ ಮತ್ತು ನಗರಸಭೆ ಕಚೇರಿಯಲ್ಲಿ ಇದೇ ರೀತಿಯ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಗದಗ್ ನಲ್ಲಿ ಶೌಚಾಲಯಗಳ ಸ್ಥಿತಿ ಶೋಚನೀಯವಾಗಿದೆ. ನಮ್ಮ ಮನವಿಯನ್ನು ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆಯ ಬೇರೆ ದಾರಿಯಿಲ್ಲದೆ, ಈ ರೀತಿಯ ಪ್ರತಿಭಟನೆ ಮಾಡಿದ್ದಾಗಿ ಶ್ರೀರಾಮ ಸೇನೆ ಧಾರವಾಡ ಮತ್ತು ಗದಗ ಸಂಚಾಲಕ ರಾಜು ಖಾನಪ್ಪನವರ್ ಹೇಳಿದರು. 

ಪ್ರತಿಭಟನೆ ಗಮನಕ್ಕೆ ಬಂದಿದ್ದು, ಅವರ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಗದಗ ಬೆಟಗೇರಿ ನಗರಸಭೆ ಆಯುಕ್ತ ಗುರು ಪ್ರಸಾದ್ ತಿಳಿಸಿದ್ದಾರೆ. 

SCROLL FOR NEXT