ರಾಜ್ಯ

'ಗ್ರ್ಯಾಂಡ್ ಚಾಲೆಂಜ್' ಯೋಜನೆ: ದೇಶದ 9 ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರು, ಮೈಸೂರು!

Manjula VN

ಬೆಂಗಳೂರು: ‘ಗ್ರ್ಯಾಂಡ್ ಚಾಲೆಂಜ್’ ಯೋಜನೆಯಡಿ ಇ- ಕಲ್ಚರ್ ಪರಿಕಲ್ಪನೆ ಉತ್ತೇಜಿಸಲು ದೇಶದ 9 ಮಹಾನಗರಗಳಿಗೆ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ಬಸ್‌ಗಳನ್ನು ನೀಡಲು ಮುಂದಾಗಿದ್ದು, ಪಟ್ಟಿಯಲ್ಲಿ ಬೆಂಗಳೂರು ಹಾಗೂ ಮೈಸೂರು ನಗರಗಳಿವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರು ಗುರುವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಬೆಂಗಳೂರಿಗೆ ಎಷ್ಟು ಬಸ್‌ಗಳ ಅಗತ್ಯವಿದೆ ಎಂಬ ಪಟ್ಟಿ ಒದಗಿಸುವಂತೆ ಕೇಂದ್ರ ಸರ್ಕಾರ ಕೇಳಿದೆ. ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಶೀಘ್ರವೇ ಕೇಂದ್ರಕ್ಕೆ ಮಾಹಿತಿ ಕಳುಹಿಸಲಾಗುತ್ತದೆ. ಬಳಿಕ ನಗರಕ್ಕೆ ಮತ್ತಷ್ಟು ಎಲೆಕ್ಟ್ರಿಕ್ ಬಸ್ ಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡಲಿದೆ. ಇದು ಅತ್ಯಂತ ಮುಖ್ಯವಾಗಿದೆ. ಏಕೆಂದರೆ, ಡೀಸೆಲ್ ಬಸ್ ಗಳ ದರ ರೂ.30 ಲಕ್ಷವಾಗಿದ್ದರೆ, ಎಲೆಕ್ಟ್ರಿಕ್ ಬಸ್ ಗಳ ದರ ರೂ.1 ಕೋಟಿ ಆಗಿದೆ ಎಂದು ಹೇಳಿದ್ದಾರೆ. 

ಭವಿಷ್ಯದಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸಲು ಕೇಂದ್ರವು ಉತ್ಸುಕವಾಗಿದೆ ಮತ್ತು ಈ ನಿಟ್ಟಿನಲ್ಲಿ ಗ್ರ್ಯಾಂಡ್ ಚಾಲೆಂಜ್ ಎಂಬ ಇ- ಕಲ್ಚರ್ ಪರಿಕಲ್ಪನೆಯನ್ನು ಜಾರಿಗೆ ತರಲಾಗಿದೆ. 

ನಗರಕ್ಕೆ ಬಂದಿರುವ ಎಲೆಕ್ಟ್ರಿಕ್ ಬಸ್ ಗಳಿಗೆ ನವೆಂಬರ್ 1ರಂದು ಚಾಲನೆ ನೀಡಲಾಗುತ್ತದೆ. ಮೆಟ್ರೋ ಫೀಡರ್ ಲೈನ್ ಮಾರ್ಗದಲ್ಲಿಯೇ ಟ್ರಯಲ್ ರನ್ ಮಾಡಲಾಗುತ್ತದೆ. ಮುಂದಿನ 20 ದಿನಗಳಲ್ಲಿ ಇನ್ನೂ 10 ಬಸ್ ಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಜೆಬಿಎಂ ಆಟೋ ಲಿಮಿಟೆಡ್ ನಿರ್ಮಿಸಿದ ಈ ಎಲೆಕ್ಟ್ರಿಕ್ ಬಸ್ ಗಳು, 33 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ, ಒಮ್ಮೆ ಚಾರ್ಜ್ ಮಾಡಿದರೆ 120 ಕಿಲೋ ಮೀಟರ್ ಸಂಚಾರಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಡಿಸೆಂಬರ್ 15 ರೊಳಗೆ ಕಂಪನಿಯು ಇನ್ನೂ 90 ವಾಹನಗಳನ್ನು ಹಸ್ತಾಂತರಿಸಲಿದೆ ಎಂದು ಮಾಹಿತಿ ನೀಡಿದ್ದಾರೆ. 

ನಗರಕ್ಕೆ ಆಗಮಿಸಿದ್ದ ಎಲೆಕ್ಟ್ರಿಕ್ ಬಸ್ ಗಳನ್ನು ಪರಿಶೀಲಿದ ಬಳಿಕ ಮಾತನಾಡಿದ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು, ಮೊದಲ ಹಂತದಲ್ಲಿ 90 ಮತ್ತು ಎರಡನೇ ಹಂತದಲ್ಲಿ 300 ಇ-ಬಸ್ಸುಗಳನ್ನು ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ.

SCROLL FOR NEXT