ರಾಜ್ಯ

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಪಿಠೋಪಕರಣ ತಯಾರಿಕಾ ಮಳಿಗೆಯಲ್ಲಿ ಬೆಂಕಿ, ಲಕ್ಷಾಂತರ ರೂ. ವಸ್ತು ಬೆಂಕಿಗಾಹುತಿ

Srinivasamurthy VN

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಪೀಠೋಪಕರಣ ತಯಾರಿಕೆ ಮಳಿಗೆಯಲ್ಲಿ ತಡರಾತ್ರಿ ನಡೆದ ಘಟನೆಯಲ್ಲಿ ಪೀಠೋಪಕರಣ ಧ್ವಂಸವಾಗಿದೆ.

ಬೆಂಗಳೂರು ನಗರದ ಮೈಸೂರು‌ ರಸ್ತೆಯಲ್ಲಿರುವ‌ ಪೀಠೋಪಕರಣ ತಯಾರಿಕೆ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣ ಮತ್ತು ಇತರೆ ವಸ್ತುಗಳು ಅಗ್ನಿಗೆ ಆಹುತಿಯಾಗಿವೆ.

ಮೈಸೂರು ರಸ್ತೆಯ ಬ್ಯಾಟರಾಯನಪುರದ ಟಿಂಬರ್ ಬಡಾವಣೆಯ 'ಲಕ್ಷ್ಮಿ‌ ಎಂಟರ್‌ಪ್ರೈಸಸ್' ಮಳಿಗೆಯಲ್ಲಿ ಈ‌ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಯಾವುದೇ‌ ಪ್ರಾಣಹಾನಿ‌ ಸಂಭವಿಸಿಲ್ಲ. ಆದರೆ ಮಳಿಗೆಯಲ್ಲಿ‌ ಸಣ್ಣದಾಗಿ‌ ಕಾಣಿಸಿಕೊಂಡಿದ್ದ ಬೆಂಕಿಯ ಕೆನ್ನಾಲಗೆ, ನೋಡ ನೋಡುತ್ತಿದ್ದಂತೆ ಧಗ ಧಗನೇ ಉರಿದು, ಇಡೀ ಮಳಿಗೆಗೆ ವ್ಯಾಪಿಸಿತ್ತು. ಪರಿಣಾಮ ಹೊಸ ಪೀಠೋಪಕರಣಕ್ಕೆ‌ ಬೆಂಕಿ‌ ತಗುಲಿ, ಸಾಕಷ್ಟು ಪ್ರಮಾಣದ ವಸ್ತುಗಳು ಬೆಂಕಿಗಾಹುತಿಯಾಗಿದೆ ಎನ್ನಲಾಗಿದೆ. 

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದರು. ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು. ಸದ್ಯ ಮಳಿಗೆಯಲ್ಲಿರುವ ಅವಶೇಷಗಳನ್ನು‌ ತೆರವು ಮಾಡುವ‌ ಕಾರ್ಯ ಮುಂದುವರೆದಿದೆ. ಅಗ್ನಿ ಅವಘಡಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ ಎಂದರು.

SCROLL FOR NEXT