ರಾಜ್ಯ

ಬಿಲ್ಡರ್ ಗಳು ನೀರು ಪೂರೈಕೆಯ ಮೂಲವನ್ನು ಸೂಚಿಸಬೇಕು: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಮಂಡಳಿ

Harshavardhan M

ಬೆಂಗಳೂರು: ಆಸ್ತಿ ಖರೀದಿದಾರರ ಹಿತ ಕಾಯ್ದುಕೊಳ್ಳಲು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಮಂಡಳಿ(ಕೆ-ರೇರಾ) ನೂತನ ಹೆಜ್ಜೆ ಯಿಟ್ಟಿದೆ. ರೇರಾ ಪ್ರಮಾಣಪತ್ರ ಬೇಕೆಂದರೆ ಇನ್ನುಮುಂದೆ ರಾಜ್ಯದ ಎಲ್ಲಾ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳಲ್ಲಿ ಬಿಲ್ಡರ್ ಗಳು ಖರೀದಿದಾರರಿಗೆ ನೀರು ಸಂಪರ್ಕದ ಮೂಲವನ್ನು ಬಹಿರಂಗಪಡಿಸಬೇಕು.

ಆಸ್ತಿ ಖರೀದಿದಾರರು ಬೆಂಗಳೂರು ನೀರು ಸರಬರಾಜು ಮತ್ತು ಕೊಳಚೆ ಮಂಡಳಿ ಅಥವಾ ಪಂಚಾಯತ್ ನಿಂದ ಎನ್ ಒ ಸಿ ಸರ್ಟಿಫಿಕೆಟನ್ನು ಕಡ್ಡಾಯವಾಗಿ ರೇರಾಗೆ ನೀಡಬೇಕು. ಇಲ್ಲದೇ ಹೋದಲ್ಲಿ ರೇರಾ ಪ್ರಮಾಣಪತ್ರ ನೀಡುವುದಿಲ್ಲ ಎಂದು ಕೆ- ರೇರಾ ಚೇರ್ಮನ್ ಎಚ್. ಸಿ ಕಿಶೋರ್ ಚಂದ್ರ ಹೇಳಿದ್ದಾರೆ. 

ಈ ಹಿಂದೆ ಬಿಲ್ಡರ್ ಗಳು ನೀರು ಸರಬರಾಜಿನ ಕುರಿತಾಗಿ ನಮಗೆ ಆಶ್ವಾಸನೆ ನೀಡುತ್ತಿದ್ದರು. ಆದರೆ ಈಗ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುವಾಗಲೇ ಕಡ್ಡಾಯವಾಗಿ ನೀರು ಸಂಪರ್ಕ ಕುರಿತಂತೆ ದಾಖಲೆಗಳನ್ನು ಸಲ್ಲಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ಒಂದು ವೇಳೆ ಆಸ್ತಿ ಇರುವ ಪ್ರದೇಶದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಕೊಳಚೆ ಮಂಡಳಿ ಅಥವಾ ಪಂಚಾಯತ್ ನಿಂದ ನೀರಿನ ಸಂಪರ್ಕ ಇರದೇ ಇದ್ದಲ್ಲಿ ಸ್ವಂತ ಖರ್ಚಿನಿಂದ ಟ್ಯಾಂಕರ್ ಗಳಿಂದ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಬಿಲ್ಡರ್ ಗಳು ಖಾತರಿ ನೀಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT