ರಾಜ್ಯ

ಕಲ್ಲಿದ್ದಲು ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ- ಸಚಿವ ವಿ. ಸುನೀಲ್ ಕುಮಾರ್

Nagaraja AB

ಬೆಂಗಳೂರು: ಕಲ್ಲಿದ್ದಲು ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಯಾವುದೇ ಅಡಚಣೆ ಆಗಿಲ್ಲ, ಸದ್ಯ ಕೋಲ್ ಇಂಡಿಯಾ ಲಿಮಿಟೆಡ್ ಮತ್ತು ಎಸ್ ಸಿ ಸಿಎಲ್ ನಿಂದ  ದಿನಂಪ್ರತಿ12 ರಿಂದ 13 ರೇಕ್ ಕಲ್ಲಿದ್ದಲು ಪೂರೈಕೆ ಆಗುತ್ತಿದ್ದು, ಬೇಡಿಕೆ ಪೂರೈಸಲು ಸಾಧ್ಯವಾಗಿದೆ ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.

ರಾಜ್ಯ ವಿದ್ಯುತ್ ನಿಗಮ ಲಿಮಿಟೆಡ್ ನಿಂದ ಮೂರು ವಿದ್ಯುತ್  ಸ್ಥಾವರಗಳಾದ ರಾಯಚೂರು, ಬಳ್ಳಾರಿ ಹಾಗೂ ಯರಮರಸ್ ಉಷ್ಣ ವಿದ್ಯುತ್ ಸ್ಥಾವರಗಳು ಕಾರ್ಯನಿರ್ವಹಿಸುತ್ತಿವೆ.  ಈ ಪೈಕಿ ರಾಯಚೂರು ಉಷ್ಣ ವಿದ್ಯುತ್  ಸ್ಥಾವರದಲ್ಲಿ 8 ಘಟಕಗಳಿದ್ದು, 1,720 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಶಕ್ತಿ ಹೊಂದಿದೆ. ಬಳ್ಳಾರಿ ಸ್ಥಾವರದ 3 ಘಟಕಗಳಲ್ಲಿ 1,700 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಅವಕಾಶವಿದೆ. ಇನ್ನು ಯರಮರಸ್ ಸ್ಥಾವರದ 2 ಘಟಕಗಳು 1,600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಶಕ್ತಿ ಹೊಂದಿವೆ ಎಂದು ಸಚಿವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಒಟ್ಟಾರೇ 3 ಸ್ಥಾವರಗಳ 13 ಘಟಕಗಳ ಒಟ್ಟು ಉತ್ಪಾದನೆ 5,020 ಮೆಗಾ ವ್ಯಾಟ್ ಗಳಾಗಿದೆ. ಈ 13 ಘಟಕಗಳ ಪೈಕಿ 8 ಘಟಕಗಳು ಕಾರ್ಯಾಚರಿಸುತ್ತಿದ್ದು, ಇನ್ನುಳಿದ ಐದು ಘಟಕಗಳು ಬೇಡಿಕೆ ಕಡಿಮೆ ಇರುವ ಕಾರಣದಿಂದ ಸ್ಥಬ್ಧವಾಗಿದೆ. ಕೆಪಿಸಿಎಲ್ ದಿನಂಪ್ರತಿ  12-13 ರೇಕ್ ಕಲ್ಲಿದ್ದಲು ಸ್ವೀಕರಿಸುತ್ತಿದ್ದು, ರಾಜ್ಯದಲ್ಲಿ ವಿದ್ಯುತ್ ಅಭಾವ ಆಗದಂತೆ ಗಮನ ಹರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

SCROLL FOR NEXT