ರಾಜ್ಯ

ಉತ್ತರಾಖಂಡ್ ನಲ್ಲಿ ಸಿಲುಕಿರುವ ಕರ್ನಾಟಕದ 96 ಜನರು: ನಾಲ್ವರು ಪತ್ತೆಯಾಗಿಲ್ಲ!

Nagaraja AB

ಬೆಂಗಳೂರು: ಉತ್ತರಾಖಂಡ್ ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ಅಲ್ಲಿನ ನಾಗರಿಕರು ಮತ್ತು ಆಡಳಿತಕ್ಕೆ ಮಾತ್ರ ಪರಿಣಾಮ ಬೀರಿಲ್ಲ. ಆದರೆ, ಕರ್ನಾಟಕದ ಜನರು ಕೂಡಾ ಆತಂಕಗೊಂಡಿದ್ದಾರೆ. ರಾಜ್ಯದ 96 ಜನರು ಗುಡ್ಡಗಾಡು ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಲ್ಲಿ ಬೆಂಗಳೂರಿನಿಂದ ತೆರಳಿದ್ದ ಮೂವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಉತ್ತರಾಖಂಡ್ ಮತ್ತು ಕರ್ನಾಟಕ ಸರ್ಕಾರ ಪ್ರಯತ್ನಿಸಿದ್ದರೂ ಅವರ ಸಂಪರ್ಕ ಸಿಕ್ಕಿಲ್ಲ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಮನೋಜ್ ರಾಜನ್, ರಾಜ್ಯದಿಂದ ಉತ್ತರಾಖಂಡ್ ರಾಜ್ಯಕ್ಕೆ ತೆರಳಿದ್ದ 96 ಜನರ ಪೈಕಿ 92 ಜನರನ್ನು ಪತ್ತೆ ಹಚ್ಚಲಾಗಿದ್ದು, ಅವರನ್ನು ಶಿಬಿರಗಳಿಗೆ ಕರೆತರಲಾಗಿದ್ದು, ಸುರಕ್ಷಿತವಾಗಿದ್ದಾರೆ. ಮೂವರು ಬದ್ರಿನಾಥ್ ನಲ್ಲಿ ಸಿಲುಕಿದ್ದು, ಸಂಪರ್ಕದ ಕೊರತೆಯಿಂದಾಗಿ ಆಡಳಿತ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆದರೆ, ಅವರು ಸುರಕ್ಷಿತವಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಒಬ್ಬ ವ್ಯಕ್ತಿ ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿಸಿದರು.

ಉತ್ತರಾಖಂಡದಲ್ಲಿ ಸಿಲುಕಿರುವ ತಮ್ಮ ಸಂಬಂಧಿಕರ ಯೋಗಕ್ಷೇಮವನ್ನು ಕೇಳಿ ಬೆಂಗಳೂರು, ವಿಜಯಪುರ, ಉಡುಪಿ ಮತ್ತು ಉತ್ತರ ಕರ್ನಾಟಕ ಭಾಗದಿಂದ  10-15 ಕರೆಗಳನ್ನು ಸ್ವೀಕರಿಸಲಾಗಿದೆ ಎಂದು ಕೆಎಸ್ ಎನ್ ಡಿಎಂಸಿ ಅಧಿಕಾರಿಗಳು ಹೇಳಿದ್ದಾರೆ.  ಬದರಿನಾಥದಲ್ಲಿ ಸಿಲುಕಿರುವ ಮೂವರು ಬೆಂಗಳೂರಿನವರು ಮತ್ತು ಅವರನ್ನು  ಕರೆ ತರಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿ ತುಷಾರ್ ಗಿರಿನಾಥ್  ಹೇಳಿದರು. 

ಉತ್ತರಾಖಂಡದ ಪರಿಸ್ಥಿತಿ ಕಳೆದ ಬಾರಿಯಂತೆ ಕೆಟ್ಟದ್ದಲ್ಲ. ಪರಿಸ್ಥಿತಿ ಸುಧಾರಿಸಿದ ನಂತರ, ಕರ್ನಾಟಕದ ಎಲ್ಲರನ್ನು ರಸ್ತೆ ಮೂಲಕ ಹತ್ತಿರದ ರೈಲ್ವೆ ನಿಲ್ದಾಣಗಳು ಅಥವಾ ವಿಮಾನ ನಿಲ್ದಾಣಗಳಿಗೆ ಕರೆತರಲಾಗುವುದು ಎಂದು ಅವರು ಹೇಳಿದರು.

SCROLL FOR NEXT