ರಾಜ್ಯ

ಗಡಿಕೇಶ್ವಾರದಲ್ಲಿ ಮತ್ತೆ ಭೂಕಂಪನ, ಭೂಮಿಯಾಳದಲ್ಲಿ ಭಾರಿ ಸದ್ದು

Srinivasamurthy VN

ಚಿಂಚೋಳಿ: ಗುಲ್ಪರ್ಗಾ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮ ಮತ್ತೆ ಭೂಕಂಪನದಿಂದಾಗಿ ಸುದ್ದಿಗೆ ಗ್ರಾಸವಾಗಿದ್ದು, ಇಂದು ಮತ್ತೆ ಭೂಮಿ ಕಂಪಿಸಿದ ಅನುಭವಾಗಿದ್ದು, ಜನ ಭೀತಿಗೊಂಡಿದ್ದಾರೆ.

ಕಲಬುರಗಿಯಿಂದ 75 ಕಿಲೋಮೀಟರ್ ದೂರ ಇರುವ ಗಡಿಕೇಶ್ವಾರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ಬೆಳಿಗ್ಗೆ ಮತ್ತೆ ಭೂಮಿಯಿಂದ ಭಾರಿ ಸದ್ದು ಕೇಳಿ ಬಂದು ಲಘು ಕಂಪನ‌ ಸಂಭವಿಸಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.  ಬೆಳಿಗ್ಗೆ 9.51ಕ್ಕೆ ಭೂಮಿಯಿಂದ ಸದ್ದು ಕೇಳಿ ಬಂದಿದೆ. ಇಲ್ಲಿ ನಿತ್ಯ ಲಘು ಕಂಪನ ಸಂಭವಿಸುತ್ತಿದೆ ಇದರ ಅಧ್ಯಯನಕ್ಕಾಗಿ ಹೈದರಾಬಾದ್‌ನಲ್ಲಿ ರಾಷ್ಟ್ರೀಯ ಭೂಭೌತವಿಜ್ಞಾನ ಸಂಶೋಧನಾ ಸಂಸ್ಥೆ ಸಿಸ್ಮೊ ಮೀಟರ್ ಅಳವಡಿಸಿದೆ. 

ಕಂದಾಯ ಸಚಿವ ಆರ್ ಅಶೋಕ ಭೇಟಿ ನೀಡಿದ ನಂತರ ಒಂದೆರಡು ದಿನ ಸದ್ದಿನ ಅನುಭವ ತಗ್ಗಿತ್ತು. ಆದರೆ ಈಗ ಮತ್ತೆ ಮುಂದುವರೆದಿದ್ದು ಗ್ರಾಮಸ್ಥರನ್ನು ಕಂಗಾಲಾಗಿಸಿದೆ. ಗಡಿಕೇಶ್ವಾರ, ಕುಪನೂರ ಬೆನಕನಳ್ಳಿ, ಭಂಟನಳ್ಳಿ ಹಾಗೂ ಕಾಳಗಿ ತಾಲ್ಲೂಕಿನ ಹಲಚೇರಾ, ಹೊಸಳ್ಳಿ, ಕೊರವಿ, ತೇಗಲತಿಪ್ಪಿ ಗ್ರಾಮಗಳಲ್ಲಿಯೂ ಭೂಮಿಯಿಂದ ಸದ್ದು ಕೇಳಿ ಬಂದಿದೆ.

ಈಗಾಗಲೇ ಆತಂಕಗೊಂಡಿರುವ ಗ್ರಾಮಸ್ಥರಲ್ಲಿ ಧೈರ್ಯ ಮೂಡಿಸಲು ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡಿದೆ. ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಶೆಡ್ ಗಳ ನಿರ್ಮಾಣ ಮಾಡಲಾಗಿದ್ದು, ಅಲ್ಲಿ ಗ್ರಾಮಸ್ಥರಿಗೆ ಆಶ್ರಯ ನೀಡಲಾಗುತ್ತಿದೆ. ಅಂತೆಯೇ ಅಧಿಕಾರಿಗಳು ಗ್ರಾಮದ ಆಯಕಟ್ಟಿನ ಸ್ಥಳಗಳಲ್ಲಿ ಮಾರ್ಗದರ್ಶಿ ಫಲಕಗಳ ಅಳವಡಿಸಿದ್ದು, ಇದರಲ್ಲಿ ಭೂಕಂಪನ ಸಂಭವಿಸಿದಾಗ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳ ಕುರಿತು ಮಾರ್ಗದರ್ಶನ ಮಾಡಲಾಗಿದೆ.

SCROLL FOR NEXT