ರಾಜ್ಯ

ಬೆಂಗಳೂರಿನ ಅಭಿವೃದ್ಧಿಗೆ ಹೊಸ ಆಯಾಮ-ಮುಖ್ಯಮಂತ್ರಿ ಬೊಮ್ಮಾಯಿ

Nagaraja AB

ಬೆಂಗಳೂರು: ಬೆಂಗಳೂರಿನ ಅಭಿವೃದ್ಧಿಗೆ ಹೊಸ ಆಯಾಮ ನೀಡಿ ಎಲ್ಲ ಸೇವೆಗಳನ್ನು ನಾಗರಿಕರ ಮನೆ ಬಾಗಿಲಿಗೆ ತಲುಪಿಸುವ ವಿನೂತನ ಯೋಜನೆಯನ್ನು ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

 ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಬೆಂಗಳೂರು ಬೃಹತ್ ಮಹಾನಗರವಾಗಿ ಬೆಳೆಯುತ್ತಾ ಹೋಗುತ್ತಿದೆ. ಬೆಳವಣಿಗೆಗೆ ತಕ್ಕಂತೆ ಅಭಿವೃದ್ಧಿಯೂ ಆಗಬೇಕಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ತಾವು ಬದ್ಧವಾಗಿರುವುದಾಗಿ ತಿಳಿಸಿದರು.

 ಬೆಂಗಳೂರಿನ ನಾಗರಿಕರಿಗೆ ಯಾವ ಸೇವೆ ಬೋಕೋ ಆ ಸೇವೆಯನ್ನು ಅವರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡಲಾಗುವುದು, ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕಾಮಗಾರಿ ಜೊತೆಗೆ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ವಿನೂತನ ವ್ಯವಸ್ಥೆಯನ್ನು ತಂತ್ರಜ್ಞಾನ ಮತ್ತು ತಂತ್ರಾಂಶವನ್ನು ಬಳಸಿಕೊಂಡು ಜಾರಿ ಮಾಡುವುದಾಗಿ ಅವರು ಹೇಳಿದರು.

ಇದಕ್ಕೂ ಮುನ್ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಅನಾವರಣಗೊಳಿಸಿದ ಮುಖ್ಯಮಂತ್ರಿ, ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಡಯಾಲಿಸಿಸ್ ಕೇಂದ್ರ, ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಉದ್ಯಾನವನ, ಸ್ಕೇಟಿಂಗ್ ಟ್ರ್ಯಾಕ್ , ಅಗ್ರಹಾರ ದಾಸರಹಳ್ಳಿಯ ಪದವಿ ಪೂರ್ವ ಕಾಲೇಜಿನ ಕಟ್ಟಡ ಹಾಗೂ ಕ್ರೀಡಾ ಸೌಧಗಳನ್ನು ಉದ್ಘಾಟಿಸಿದರು.

ಸಚಿವರಾದ ವಿ. ಸೋಮಣ್ಣ, ಆರ್. ಅಶೋಕ್, ಡಾ. ಕೆ. ಸುಧಾಕರ್, ವಿ. ಮುನಿರತ್ನ, ಸಂಸದ ತೇಜಸ್ವಿ ಸೂರ್ಯ ಮತ್ತಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

SCROLL FOR NEXT