ರಾಜ್ಯ

ದೇವಾಲಯ ತೆರವು ಬಗ್ಗೆ ಸದ್ಯದಲ್ಲೇ ಸರ್ಕಾರದಿಂದ ನಿಲುವು ಪ್ರಕಟ, ಸಂಯಮದಿಂದ ವರ್ತಿಸಲು ಡಿಸಿಗಳಿಗೆ ಸೂಚನೆ: ಸಚಿವ ಆರ್.ಅಶೋಕ್

Sumana Upadhyaya

ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಜ್ಯದ ಹಲವು ದೇವಾಲಯಗಳನ್ನು ನೆಲಸಮ ಮಾಡುವ ವಿಚಾರದಲ್ಲಿ ಉಂಟಾಗಿರುವ ಗೊಂದಲ, ವ್ಯಾಪಕ ವಿರೋಧ ಹಿನ್ನೆಲೆಯಲ್ಲಿ ಮೊದಲೇ ನೊಟೀಸ್ ನೀಡದೆ ಯಾವುದೇ ಧಾರ್ಮಿಕ ಕೇಂದ್ರಗಳನ್ನು ನೆಲಸಮ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದೇನೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧದ ಪಡಸಾಲೆಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಧಿಕಾರಿಗಳ ಜೊತೆ ಕೂಡ ಮಾತನಾಡುತ್ತೇನೆ, ಈ ರೀತಿ ಏಕಾಏಕಿ ಸುಪ್ರೀಂ ಕೋರ್ಟ್ ನ ಆದೇಶವೆಂದು ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ, ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಕೂಡ ನಿನ್ನೆ ಮಾತನಾಡಿದ್ದೇನೆ, ದೇವಸ್ಥಾನವನ್ನು ಕೆಡವುದಕ್ಕೆ ಮೊದಲು ಸ್ಥಳೀಯ ಜನರೊಂದಿಗೆ ಚರ್ಚಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬದಲಿ ಜಾಗವನ್ನು ತೋರಿಸಿ ಆ ಬಳಿಕ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿತ್ತು. ಈ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸ್ಪಷ್ಟವಾದ ಸೂಚನೆ ನೀಡುತ್ತೇನೆ ಎಂದರು.

ದೇವಸ್ಥಾನಗಳನ್ನು ತೆರವುಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು, ಸ್ಥಳೀಯ ಎಂ ಎಲ್ ಎಗಳು, ಎಂ.ಎಲ್ಸಿ ಗಳ ಜೊತೆ ಕೂಡ ಮಾತನಾಡಿದ್ದೇನೆ, ಇದು ಕೇವಲ ಮೈಸೂರಿಗೆ ಸಂಬಂಧಪಟ್ಟ ವಿಷಯ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು. 12 ವರ್ಷಗಳ ಹಿಂದಿನ ಸುಪ್ರೀಂ ಕೋರ್ಟ್ ಆದೇಶದಲ್ಲಿ ಕೇವಲ ದೇವಸ್ಥಾನ ಮಾತ್ರವಲ್ಲದೆ ಚರ್ಚ್, ಮಸೀದಿಗಳು ಕೂಡ ಇವೆ. ಈ ಬಗ್ಗೆ ಸರ್ಕಾರ ಸದ್ಯದಲ್ಲಿಯೇ ನಿಲುವು ಪ್ರಕಟಿಸಲಿದ್ದು ಅಲ್ಲಿಯವರೆಗೆ ಜಿಲ್ಲಾಧಿಕಾರಿಗಳು ಜನರ ಭಾವನೆ ಮತ್ತು ಸುಪ್ರೀಂ ಕೋರ್ಟ್ ಆದೇಶ ಮಧ್ಯೆ ಸಂಯಮದಿಂದ ವರ್ತಿಸಬೇಕೆಂದು ಮನವಿ ಮಾಡಿದರು.

SCROLL FOR NEXT