ರಾಜ್ಯ

ಆಮೆ ವೇಗದಲ್ಲಿ ಸಾಗುತ್ತಿರುವ ನಂದಿ ಬೆಟ್ಟದ ರಸ್ತೆ ಕಾಮಗಾರಿ: ಪ್ರವಾಸೋದ್ಯಮದ ಮೇಲೆ ಗಂಭೀರ ಪರಿಣಾಮ

Manjula VN

ಬೆಂಗಳೂರು: ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮಂಡಳಿಯು ನಂದಿ ಬೆಟ್ಟದಲ್ಲಿ ತೆಗೆದುಕೊಂಡಿರುವ ರಸ್ತೆ ಕಾಮಗಾರಿ ಕೆಲಸಗಳು ಆಮೆ ವೇಗದಲ್ಲಿ ಸಾಗುತ್ತಿದ್ದು, ಇದು ಕೇವಲ ಪ್ರವಾಸೋದ್ಯಮದ ಮೇಲೆ ಮಾತ್ರವಲ್ಲದೆ ಜನರ ಸಂಚಾರದ ಮೇಲೂ ಗಂಭೀರ ಪರಿಣಾಮ ಬೀರಿದೆ. 

ಕಳೆದ ಆಗಸ್ಟ್ 24 ರಂದು ಜಿಲ್ಲೆಯಲ್ಲಿ ಬಿದ್ದ ಮಳೆಯ ಅರ್ಭಟಕ್ಕೆ ನಂದಿಗಿರಿಧಾಮದಲ್ಲಿ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಭಾರೀ ಭೂ ಕುಸಿತವಾಗಿ ಮಣ್ಣು ಗುಡ್ಡೆ ರಸ್ತೆ ಮೇಲೆ ಬಿದ್ದ ಪರಿಣಾಮ ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಾಶವಾಗಿ ಅಪಾರ ಪ್ರಮಾಣದಲ್ಲಿ ಸಸ್ಯ ಸಂಪತ್ತು ಕೂಡ ಮಳೆಗೆ ತೀವ್ರತೆಗೆ ಕೊಚ್ಚಿ ಹೋಗಿತ್ತು. 

ಬಳಿಕ ಜಿಲ್ಲಾ ಆಡಳಿತ ಮಂಡಳಿಯು ರಸ್ತೆ ಕಾಮಾಗಾರಿ ಕೆಲಸವನ್ನು ಕೈಗೆತ್ತಿಕೊಂಡಿತ್ತು. ಈ ಕಾಮಗಾರಿ ಕೆಲಸಗಳು ತಡವಾಗಿ ಸಾಗುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಈಗಾಗಲೇ ಕೋವಿಡ್ ನಿಂದ ನಲುಗಿರುವ ವ್ಯಾಪಾರಿಗಳಿಗೆ ತಡವಾಗುತ್ತಿರುವ ಕಾಮಗಾರಿ ಗಾಯದ ಮೇಲೆ ಬರೆ ಎಳೆಯುವಂತೆ ಮಾಡಿದೆ. 

ಕೋವಿಡ್ ಲಾಕ್ಡೌನ್ ಬಳಿಕ ನಿಧಾನಗತಿಯಲ್ಲಿ ಬೆಟ್ಟದಲ್ಲಿ ವ್ಯಾಪಾರ ಚಟುವಟಿಕೆಗಳು ಆರಂಭವಾಗುತ್ತಿತ್ತು. ಆದರೆ, ರಸ್ತೆಗಳನ್ನು ಮುಚ್ಚಿದ ಹಿನ್ನೆಲೆಯಲ್ಲಿ ಇದೀಗ ಮತ್ತೆ ವ್ಯಾಪಾರ-ವಹಿವಾಟಿನ ಮೇಲೆ ಪರಿಣಾಮ ಬೀರಿದೆ ಎಂದು ನಂದಿ ಬೆಟ್ಟದ ಹೋಟೆಲ್ ಹಾಗೂ ರೆಸಾರ್ಟ್ ಮಾಲೀಕ ರಾಜು ಎಂಬುವವರು ಹೇಳಿದ್ದಾರೆ. 

ಚಿಕ್ಕಬಳ್ಳಾಪುರದ ಉಪ ಆಯುಕ್ತೆ ಆರ್ ಲತಾ ಅವರು ಮಾತನಾಡಿ, ಸಾಕಷ್ಟು ಎಚ್ಚರಿಕೆ ಕಾಮಗಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ವೇಗ ನಿಧಾನವಾಗಿದೆ ಎಂದು ಹೇಳಿದ್ದಾರೆ. 

ಅಕ್ಟೋಬರ್ ಅಂತ್ಯದ ವೇಳೆಗೆ ಪ್ರವಾಸಿಗರಿಗೆ ಮುಕ್ತವಾಗಲಿದೆ ಎಂಬ ಭರವಸೆ ಇದೆ. ಪಿಡಬ್ಲ್ಯೂಡಿ ರೂ.80 ಲಕ್ಷ ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಕಾಮಗಾರಿಯಲ್ಲಿ ಭೂಗತ ಮತ್ತು ಮೇಲ್ಮೈ ಮಟ್ಟವನ್ನು ಬಲಪಡಿಸಲಾಗುತ್ತಿದೆ. ಬೆಂಗಳೂರಿನಿಂದ ತಜ್ಞರ ತಂಡವನ್ನು ಕೂಡ ಸ್ಥಳಕ್ಕೆ ಕರೆತರಲಾಗಿದೆ ಎಂದು ತಿಳಿಸಿದ್ದಾರೆ.

SCROLL FOR NEXT