ರಾಜ್ಯ

ಬೆಂಗಳೂರು: ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ನೈಜೀರಿಯಾ ನಟನ ಬಂಧನ

Lingaraj Badiger

ಬೆಂಗಳೂರು: ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ನೈಜೀರಿಯಾ ನಟನನ್ನು ನಗರದ ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಚಕ್ವಿಮ್ ಮಾಲ್ವಿನ್ ಬಂಧಿತ ಡ್ರಗ್ ಪೆಡ್ಲರ್ ಹಾಗೂ ನಟನಾಗಿದ್ದು, ಬ್ಯುಸಿನೆಸ್ ಮಾಡುವ ವ್ಯಕ್ತಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡ್ತಿದ್ದ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಖಚಿತ ಮಾಹಿತಿ ಮೇರೆಗೆ ಬಿಡಿಎ ಕಾಂಪ್ಲೆಕ್ಸ್ ಮೇಲೆ ದಾಳಿ ಮಾಡಲಾಗಿದೆ. ಬೆಂಗಳೂರಿನ ಹೆಚ್‌ಬಿಆರ್ ಲೇಔಟ್‌ನಲ್ಲಿರುವ ಕಾಂಪ್ಲೆಕ್ಸ್ ಮೇಲೆ ದಾಳಿ ಮಾಡಿದ್ದೇವೆ. ಆರೋಪಿ ಬಳಿಯಿದ್ದ 10 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಶರಣಪ್ಪ ಅವರು ಹೇಳಿದ್ದಾರೆ.

ಮುಂಬೈನ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಚಕ್ವಿಮ್ ಮಾಲ್ವಿನ್ ನೈಜೀರಿಯಾದಲ್ಲಿ ಮೂರು ಚಿತ್ರಗಳಲ್ಲಿ‌ ನಟಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಕನ್ನಡದ ಅಣ್ಣಾಬಾಂಡ್, ಪರಮಾತ್ಮ, ತಮಿಳಿನ ಸಿಂಗಂ, ವಿಶ್ವರೂಪಂ ಸೇರಿ 20 ಚಿತ್ರಗಳಲ್ಲಿ ಸಹನಟನಾಗಿಯೂ ಆತ ನಟಿಸಿದ್ದ. ಆರೋಪಿ ನಟನಿಂದ 10 ಲಕ್ಷ ಮೌಲ್ಯದ ಹ್ಯಾಶಿಷ್ ಆಯಿಲ್, ಎಂಡಿಎಂಎ ಜಪ್ತಿ ಮಾಡಲಾಗಿದೆ.

SCROLL FOR NEXT