ರಾಜ್ಯ

ಎಸಿಬಿ ರದ್ದುಗೊಳಿಸಿದ ಹೈಕೋರ್ಟ್; ಸಿಎಂ ಬೊಮ್ಮಾಯಿ ಮೊದಲ ಪ್ರತಿಕ್ರಿಯೆ!

Srinivasamurthy VN

ಬೆಂಗಳೂರು: ಎಸಿಬಿ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶದ ಕುರಿತಾಗಿ ಮುಂದಿನ ಸಚಿವ ಸಂಪುಟಸಭೆಯಲ್ಲಿ ಚರ್ಚಿಸಿ, ನಮ್ಮ ಚುನಾವಣಾ ಪ್ರಣಾಳಿಕೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದಲ್ಲಿ ಶುಕ್ರವಾರ ಮಾತನಾಡಿದ ಅವರು, ಎಸಿಬಿ ರದ್ದು ಕುರಿತಾಗಿ ಗುರುವಾರ ಹೈಕೋರ್ಟ್ ಆದೇಶ ಆಗಿದೆ. ನಮ್ಮ ಪಕ್ಷದ ಪ್ರಣಾಳಿಕೆ ಗಮನದಲ್ಲಿಟ್ಟುಕೊಂಡು, ಹೈಕೋರ್ಟ್ ಆದೇಶ ಕೊಟ್ಟಿರೋದನ್ನು ಗಮನಿಸಿದೆ. ನಮ್ಮ ಪಕ್ಷದ ಪ್ರಣಾಳಿಕೆ ಮೂಲ ಪ್ರತಿ ತೆಗೆದುಕೊಂಡು ಚರ್ಚೆ ಮಾಡ್ತೀವಿ. ಮುಂದೆ ಏನೆಲ್ಲಾ ಮಾಡಬಹುದು ಎಂದು ತೀರ್ಮಾನ ಮಾಡ್ತೀವಿ ಎಂದರು.

ಶಿವಮೊಗ್ಗ ಸುಬ್ಬಣ್ಣಗೆ ಸಂತಾಪ
ಇದೇ ಸಂದರ್ಭದಲ್ಲಿ ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ ಸೂಚಿಸಿದರು. ಶಿವಮೊಗ್ಗ ಸುಬ್ಬಣ್ಣ ನಮ್ಮನ್ನು ಅಗಲಿರೋದು ಬಹಳ ದುಃಖಕರ ಸಂಗತಿ ಎಂದು ಸಿಎಂ ಸಂತಾಪ ಸೂಚಿಸಿದರು. ಅವರು ಸಾಹಿತ್ಯ, ಸಂಗೀತ, ಹಾಡುಗಾರಿಕೆ ಎಲ್ಲದರಲ್ಲೂ ಮುಂಚೂಣಿಯಲ್ಲಿದ್ದರು. ಹಲವು ಪ್ರಶಸ್ತಿಗೆ ಭಾಜನರಾದವರು ಎಂದರು. ಕರ್ನಾಟಕದ ಮನೆ ಮನೆಗೆ ಅವರ ಹಾಡು ಮುಟ್ಟಿತ್ತು. ಕನ್ನಡದ ಮಹಾನ್ ಕಲಾವಿದರನ್ನು ಕಳೆದುಕೊಂಡು ಬಡವಾಗಿದೆ. ಮೃತದೇಹವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಗೆ ಹಿನ್ನಡೆ: ಆರ್. ಆಶೋಕ್
ಎಸಿಬಿ ರದ್ದು ವಿಚಾರವಾಗಿ ಹೈಕೋರ್ಟ್ ಆದೇಶದಿಂದ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ ಹೊರತು ಬಿಜೆಪಿಗೆ ಅಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು. ವಿಧಾನಸೌಧದಲ್ಲಿ ಶುಕ್ರವಾರ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹಿಂದೆ ಎಸಿಬಿ ಜಾರಿಗೆ ತಂದವರು. ಕಾಂಗ್ರೆಸ್ ಸರ್ಕಾರ ಅದನ್ನು ತಂದಿದ್ದು. ಇದರಿಂದ ಬಿಜೆಪಿಗೆ ಯಾವುದೇ ಹಿನ್ನಡೆ ಆಗಿಲ್ಲ. ಏನಾದ್ರೂ ಹಿನ್ನಡೆ ಆಗಿದ್ರೆ ಅದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದರು.

2016 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚಿಸಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ಕರ್ನಾಟಕ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ ಮತ್ತು ಎಸಿಬಿಯಲ್ಲಿ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ವರ್ಗಾಯಿಸಿದೆ.
 

SCROLL FOR NEXT