ರಾಜ್ಯ

ಬೆಳಗಾವಿಯಲ್ಲಿ ಮತ್ತೆ ಪ್ರತ್ಯಕ್ಷವಾದ ಚಿರತೆ ಪತ್ತೆಹಚ್ಚಲು ವಿಶೇಷ ಶ್ವಾನದಳ, ಸ್ಥಳೀಯರಲ್ಲಿ ಆತಂಕ

Sumana Upadhyaya

ಬೆಳಗಾವಿ: ಬೆಳಗಾವಿಯ ಗಾಲ್ಫ್ ಮೈದಾನ ಸಮೀಪ ಮತ್ತೆ ಚಿರತೆ ಕಾಣಿಸಿಕೊಳ್ಳುವ ಸುತ್ತಮುತ್ತಲಿನ ಜನರನ್ನು ಆತಂಕಕ್ಕೀಡುಮಾಡಿದೆ. 

ಮೊನ್ನೆ ಆಗಸ್ಟ್ 5ರಂದು ಜಾಧವ ನಗರದಲ್ಲಿ ಚಿರತೆ ಕಾಣಿಸಿಕೊಂಡು ನಂತರ ತಲೆಮರೆಸಿಕೊಂಡಿದ್ದು, ಚಿರತೆಗಾಗಿ ಅರಣ್ಯ ಮತ್ತು ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸುತ್ತ ಬಂದಿತ್ತಾದರೂ ಚಿರತೆ ಪತ್ತೆಯಾಗಿರಲಿಲ್ಲ. ಚಿರತೆ ಕಂಡು ಬಂದ ವಿಡಿಯೋ ವೈರಲ್ ಆಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಶಂಕಿತ ಪ್ರದೇಶಗಳಲ್ಲಿ ಚಿರತೆ ಸೆರೆಹಿಡಿಯಲು ಶೋಧ ಆರಂಭಿಸಿದ್ದಾರೆ.

ಇದೀಗ ಮತ್ತೆ ನಿನ್ನೆ ಸಿಪಿಎಡ್ ಗ್ರೌಂಡ್ ಬಳಿ ರಸ್ತೆ ದಾಟುವುದು ಕಾಣಿಸಿದ್ದು ಅದನ್ನು ಹಿಡಿಯಲು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ವ್ಯಾಪಕ ಬಲೆ ಬೀಸಿದ್ದಾರೆ. 

ವಿಶೇಷ ಶ್ವಾನದಳ: ಚಿರತೆಯನ್ನು ಪತ್ತೆಹಚ್ಚಲು ಹುಕ್ಕೇರಿಯಿಂದ ವಿಶೇಷ ಶ್ವಾನದಳವನ್ನು ಕರೆತರಲಾಗಿದೆ. ಚಿರತೆ ಕಂಡುಬಂದ ಸುತ್ತಮುತ್ತ ಸೆಕ್ಷನ್ 144 ಜಾರಿಗೊಳಿಸಿ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಧಿಕಾರಿಗಳನ್ನು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಸಾರ್ವಜನಿಕರು ಅನಗತ್ಯವಾಗಿ ಸ್ಥಳದಲ್ಲಿ ಸೇರಿದರೆ ಸಿಬ್ಬಂದಿ ಕಾರ್ಯಾಚರಣೆಗೆ ಅಡ್ಡಿಯುಂಟಾಗುತ್ತದೆ. ಚಿರತೆಯನ್ನು ಮತ್ತಷ್ಟು ಕೆರಳುವಂತೆ ಮಾಡುತ್ತದೆ. ಅಖಾಡಕ್ಕೆ ಶೂಟರ್ಸ್ ಗಳ ಎಂಟ್ರಿಯಾಗಿದೆ. 

ಶಾಲೆ-ಕಾಲೇಜುಗಳಿಗೆ ರಜೆ: ಚಿರತೆ ದಾಳಿ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಸುತ್ತಮುತ್ತಲಿನ 22 ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಹಿಂದೆ ಚಿರತೆ ಕಂಡು ಬರದ ಕಾರಣ ಶಾಲೆಗಳನ್ನು ಪುನರಾರಂಭಿಸಿದ್ದರು. ಆದರೆ ಈಗ ಮತ್ತೆ ಚಿರತೆ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಉದ್ದೇಶದಿಂದ 22 ಶಾಲೆಗಳಿಗೆ ಜಿಲ್ಲಾಧಿಕಾರಿ  ನಿನ್ನೆ ರಜೆ ಘೋಷಿಸಿದ್ದು ಇಂದು ಕೂಡ ಮುಂದುವರಿದಿದೆ. ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜ ನಾಲತ್ವಾಡ ಅವರು ಶಾಲೆಗಳಿಗೆ ರಜೆ ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT