ರಾಜ್ಯ

ಕೆಂಪಣ್ಣ ಆರೋಪದಲ್ಲಿ ಹುರುಳಿಲ್ಲ, ಆಧಾರಗಳಿದ್ದರೆ ಲೋಕಾಯುಕ್ತಕ್ಕೆ ಬೇಕಾದರೆ ದೂರು ನೀಡಲಿ: ಸಿಎಂ ಬೊಮ್ಮಾಯಿ

Sumana Upadhyaya

ಬೆಂಗಳೂರು: ಕೆಂಪಣ್ಣ ಮಾಡುತ್ತಿರುವ ಯಾವುದೇ ಆರೋಪದಲ್ಲಿ ಹುರುಳಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಬಂದ ನಂತರ ಆರೋಪ ಮಾಡುತ್ತಿದ್ದಾರೆ. ಇದನ್ನು ಪ್ರಮುಖವಾಗಿ ಗಮನಿಸಬೇಕು. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಟೆಂಡರ್ ಪರಿಶೀಲನಾ ಸಮಿತಿಯನ್ನು ಮಾಡಿದ್ದೇವೆ. ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲದ ಕ್ರಮ ಕೈಗೊಂಡಿದ್ದೇವೆ ಎಂದು ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ 40% ಆರೋಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಆಧಾರರಹಿತ ಆರೋಪಗಳನ್ನು ಮಾಡುವುದರಲ್ಲಿ ಅರ್ಥವಿಲ್ಲ. ಯಾವುದಾದರೂ ನಿರ್ದಿಷ್ಟ ಕೆಲಸ, ವಿಷಯದಲ್ಲಿ ತಪ್ಪಾಗಿದ್ದರೆ ಕೆಂಪಣ್ಣ ಅವರು ಲೋಕಾಯುಕ್ತಕ್ಕೆ ಬೇಕಾದರೆ ದೂರು ನೀಡಲಿ, ಲೋಕಾಯುಕ್ತಕ್ಕೆ ಈಗ ಹೆಚ್ಚಿನ ಬಲ ಬಂದಿದೆ. ಆಧಾರರಹಿತ ಹೇಳಿಕೆಗಳಿಂದ ಯಾವುದೇ ಪ್ರಯೋಜನವಿಲ್ಲ. 

ಕಾಂಗ್ರೆಸ್ ನಾಯಕರ ಮನೆಯಿಂದ ಹೊರಗೆ ಬಂದು ಕೆಂಪಣ್ಣ ಆರೋಪ ಮಾಡಿದ್ದಾರೆ. ಇವರ ಬಳಿ ದಾಖಲೆಗಳಿದ್ದರೆ ಯಾವುದೇ ಶಾಸಕ, ಸಚಿವ, ಅಧಿಕಾರಿ ವಿರುದ್ಧ ಲೋಕಾಯುಕ್ತರಿಗೆ ದೂರು ಕೊಡಲಿ. ಲೋಕಾಯುಕ್ತರು ತನಿಖೆ ಮಾಡಿ ಕ್ರಮ ತಗೊಳ್ತಾರೆ. ಆಧಾರ ರಹಿತ ಹೇಳಿಕೆಗಳು ನಿರ್ದಿಷ್ಟ ಉದ್ದೇಶದಿಂದ ಹೊರಗೆ ಬರುತ್ತವೆ. ಇವಕ್ಕೆ ನಾನು ಪ್ರತಿಕ್ರಿಯಿಸಬೇಕಿಲ್ಲ ಎಂದು ಗರಂ ಆದರು. 

ಪ್ರಧಾನಿಗೆ ಪತ್ರ ಬರೆಯಲು ಈ ದೇಶದ ಎಲ್ಲರಿಗೂ ಸ್ವಾತಂತ್ರ್ಯವಿದೆ. ಯಾರು ಬೇಕಾದರೂ ಪ್ರಧಾನಿಗೆ ಪತ್ರ ಬರೆಯಬೇಕು. ಅವರ ಸ್ವಾತಂತ್ರ್ಯವನ್ನು ನಾನು ಗೌರವಿಸುತ್ತೇನೆ. ಗುತ್ತಿಗೆದಾರರ ಸಂಘ ಕೆಂಪಣ್ಣ ಅವರದ್ದು ಒಂದೇ ಇಲ್ಲ. ಹಲವಾರು ಗುತ್ತಿಗೆದಾರರ ಸಂಘಗಳು ಇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

SCROLL FOR NEXT