ರಾಜ್ಯ

BBMP ಚುನಾವಣಾ ಪ್ರಕ್ರಿಯೆಗೆ ಚಾಲನೆ: ಕರಡು ಮತದಾರರ ಪಟ್ಟಿ ಪ್ರಕಟ, ಮತದಾರರ ಸಂಖ್ಯೆ ಹೆಚ್ಚಳ!

Srinivasamurthy VN

ಬೆಂಗಳೂರು: ನಿರೀಕ್ಷೆಯಂತೆಯೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೊನೆಗೂ ಕರಡು ಮತದಾರರ ಪಟ್ಟಿ ಪ್ರಕಟಿಸುವ ಮೂಲಕ BBMP ಚುನಾವಣಾ ಪ್ರಕ್ರಿಯೆಗೆ ಗುರುವಾರ ಅಧಿಕೃತವಾಗಿ ಚಾಲನೆ ನೀಡಿದೆ.

ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಸವರಾಜು ಮತ್ತು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು 243 ವಾರ್ಡ್ವಾರು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸುವ ಕುರಿತು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರ ಅಧಿಕಾರಾವಧಿ ಮುಗಿದು 2 ವರ್ಷಗಳ ನಂತರ ಪಾಲಿಕೆಯ ಚುನಾವಣಾ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ರಾಜ್ಯ ಚುನಾವಣಾ ಆಯೋಗವು ಗುರುವಾರ ಕರಡು ಮತದಾರರ ಪಟ್ಟಿ ಪ್ರಕಟಿಸಿದೆ.

ಪಾಲಿಕೆಗೆ 2015ರಲ್ಲಿ ಚುನಾವಣೆ ನಡೆದಿದ್ದ ಸಂದರ್ಭದಲ್ಲಿನ ಮತದಾರರ ಸಂಖ್ಯೆಗೆ ಹೋಲಿಸಿದರೆ ಈಗ 7,86,229 ಮತದಾರರು ಹೊಸದಾಗಿ ಕರಡು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 2015ರಲ್ಲಿ 71,22,165 ಮಂದಿ ಮತದಾರರಿದ್ದರು. ಈಗ ಪಾಲಿಕೆಯ 243 ವಾರ್ಡ್‌ಗಳ ವ್ಯಾಪ್ತಿಯಲ್ಲಿ 79,08,394 ಮಂದಿ ಮತದಾರರಿದ್ದಾರೆ. ಈ ಪೈಕಿ 41,09,496 ಮಂದಿ ಪುರುಷ, 37,97,497 ಮಂದಿ ಮಹಿಳಾ ಹಾಗೂ 1,401 ಮಂದಿ ಇತರೆ ಮತದಾರರು ಸೇರಿದ್ದಾರೆ ಎಂದು ತಿಳಿದುಬಂದಿದೆ.

ಆನೇಕಲ್‌ನ ಕೂಡ್ಲು ವಾರ್ಡ್‌ನಲ್ಲಿ ಕನಿಷ್ಠ 18,604 ಮತದಾರರಿದ್ದು, ಬ್ಯಾಟರಾಯನಪುರದ ಥಣಿಸಂದ್ರದಲ್ಲಿ ಗರಿಷ್ಠ 51,653 ಮತದಾರರಿದ್ದಾರೆ ಎಂದು ಬಸವರಾಜು ವಿವರಿಸಿದರು.

ಆಕ್ಷೇಪಣೆ ಸಲ್ಲಿಕೆಗೆ ಸೆ.2ರವರೆಗೆ ಕಾಲಾವಕಾಶ
ಈ ಕರಡು ಪ್ರತಿಯನ್ನು ಈಗಾಗಲೇ ಬಿಬಿಎಂಪಿ ವಲಯ ಜಂಟಿ ಆಯುಕ್ತರ ಕಚೇರಿ, ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ, ವಾರ್ಡ್‌ ಕಚೇರಿಗಳಲ್ಲಿ ಮತ್ತು ಪಾಲಿಕೆಯ ವೆಬ್‌ಸೈಟ್‌ (www.bbmp.gov.in)ನಲ್ಲಿ ಕರಡು ಪ್ರತಿಯ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸಾರ್ವಜನಿಕರು ಹಾಗೂ ಮತದಾರರು ಪಟ್ಟಿ ಪರಿಶೀಲಿಸಿ ತಮ್ಮ ವಿವರ ಸರಿಯಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವುದು, ವಾರ್ಡ್‌ ಬದಲಾಗಿರುವುದು, ಹೆಸರು ಕೈಬಿಡುವುದೂ ಸೇರಿದಂತೆ ಆಕ್ಷೇಪಣೆ ಸಲ್ಲಿಸಲು ಸೆ.2ರವರೆಗೆ ಕಾಲಾವಕಾಶ ನೀಡಲಾಗಿದೆ. ಜತೆಗೆ ಹೊಸ ಮತದಾರರಿಗೆ ಹೆಸರು ಸೇರ್ಪಡೆ ಮಾಡಲು ವೋಟರ್‌ ಹೆಲ್ಪ್‌ಲೈನ್‌ ಆ್ಯಪ್‌ ಮತ್ತು ಎನ್‌ವಿಎಸ್‌ಪಿ ಪೋರ್ಟಲ್‌ ಮೂಲಕ ವಿಧಾನಸಭಾ ಕ್ಷೇತ್ರವಾರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮತದಾರರಿಂದ ಸಲ್ಲಿಕೆಯಾದ ಆಕ್ಷೇಪಣಾ ಅರ್ಜಿಗಳನ್ನು ಚುನಾವಣಾ ಆಯೋಗವು ಪರಿಶೀಲಿಸಿ ಸೆ.22ರಂದು ವಾರ್ಡ್‌ವಾರು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಿದೆ.

“ಎಲ್ಲ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ನಾನು ಕೋರುತ್ತೇನೆ. ಮತದಾರರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವಲ್ಲಿ ಹೆಚ್ಚಿನ ಗಮನ ಹರಿಸಬೇಕು' ಎಂದು ಬಸವರಾಜು ಹೇಳಿದರು. ಇದೇ ವೇಳೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಹೆಚ್ಚಿನ ಜನರು ನೋಂದಾಯಿಸಲು ಮತ್ತು ಮತದಾನ ಮಾಡಲು ಪ್ರೋತ್ಸಾಹಿಸಲು ಸಂಬಂಧಿಸಿದ ಕಂದಾಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಬೂತ್ ಮಟ್ಟದ ಏಜೆಂಟರನ್ನು ಒದಗಿಸುವಂತೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. 

ಅಲ್ಲದೆ “ಬೆಂಗಳೂರು ಸಾಂಪ್ರದಾಯಿಕವಾಗಿ ಚುನಾವಣೆಗಳಲ್ಲಿ ಕಡಿಮೆ ಶೇಕಡಾವಾರು ಮತದಾನಕ್ಕೆ ಸಾಕ್ಷಿಯಾಗುವುದರಿಂದ, ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಮತದಾನದ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಹೊಸ ಮತ್ತು ಮೊದಲ ಬಾರಿಗೆ ಮತದಾರರಿಗೆ ನಾವು ಮನವಿ ಮಾಡುತ್ತೇವೆ ಎಂದು ಅವರು ಹೇಳಿದರು.
 

SCROLL FOR NEXT