ರಾಜ್ಯ

ಬೆಳಗಾವಿ: ಆನೆಗಳ ಆಹಾರಕ್ಕಾಗಿ ರೈತರ ಕಬ್ಬು ಕದಿಯುತ್ತಿರುವ ಕರ್ನಾಟಕದ ಅರಣ್ಯ ಇಲಾಖೆ ಅಧಿಕಾರಿಗಳು!

Shilpa D

ಬೆಳಗಾವಿ: ಚಿರತೆ ಶೋಧಕ್ಕೆ ಬೆಳಗಾವಿಗೆ ಬಂದಿರುವ ಗಜಪಡೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕಬ್ಬು ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ. ನಗರದ ಗಾಲ್ಫ್ ಕ್ಲಬ್ ಮೈದಾನದಲ್ಲಿ ಅವಿತುಕೊಂಡು ಪ್ರತಿದಿನವೂ ಕಣ್ಣಾಮುಚ್ಚಾಲೆ ಆಡುತ್ತಿರುವ ಚಿರತೆ ಹಿಡಿಯಲು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್​ನಿಂದ ಎರಡು ಆನೆಗಳನ್ನು ತರಲಾಗಿದೆ. ಗಜಪಡೆಗಳ ಹೊಟ್ಟೆ ತುಂಬಲು ಅರಣ್ಯ ಇಲಾಖೆ ಸಿಬ್ಬಂದಿ ರೈತರು ಬೆಳೆದ ಕಬ್ಬಿನ ಬೆಳೆಯನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಬುಧವಾರ ಮುಂಜಾನೆ ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಕಬ್ಬು ರೈತರೊಬ್ಬರ ಹೊಲಕ್ಕೆ ನುಗ್ಗಿ 5 ಕ್ವಿಂಟಾಲ್‌ನಷ್ಟು ಬೆಳೆಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ರೈತರು ದೂರಿದ್ದಾರೆ. ಬೆಳಗ್ಗೆ ತಮ್ಮ ಹೊಲಕ್ಕೆ ಭೇಟಿ ನೀಡಿದಾಗ ರೈತ ರಾಜು ಕಣಬರ್ಕರ್  ಅವರಿಗೆ ವಿಷಯ ತಿಳಿದಿದೆ. ಅರಣ್ಯಾದಿಕಾರಿಗಳು ಸಂಪೂರ್ಣವಾಗಿ ಬೆಳೆದ ಕಬ್ಬನ್ನು  ಕತ್ತರಿಸಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು. ನಂತರ ಇತರ ಗ್ರಾಮಸ್ಥರನ್ನು ಒಟ್ಟುಗೂಡಿಸಿ, ಆನೆಗಳಿರುವ ಗಾಲ್ಫ್ ಮೈದಾನಕ್ಕೆ ತೆರಳಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.

ಮೊದಲು ಅರಣ್ಯಾಧಿಕಾರಿಗಳು  ಆರೋಪಗಳನ್ನು ನಿರಾಕರಿಸಿದರು, ಆದರೆ ನಂತರ ಪರಿಹಾರ ನೀಡಲು ಒಪ್ಪಿಕೊಂಡರು ಎಂದು ರಾಜು ಹೇಳಿದ್ದಾರೆ. ಕಣಬರ್ಕರ್‌ಗೆ ಪರಿಹಾರ ನೀಡುವ ಮೊದಲು ಆಗಿರುವ ನಷ್ಟವನ್ನು ನಿರ್ಣಯಿಸಲು ಸಮೀಕ್ಷೆ ನಡೆಸಲಾಗುವುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

SCROLL FOR NEXT