ರಾಜ್ಯ

ಭಾರಿ ಮಳೆ: ಮಂಗಳವಾರ ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

Srinivasamurthy VN

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಹೌದು.. ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಪ್ರಮುಖವಾಗಿ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಬೆಂಗಳೂರಿನಲ್ಲಿ ಮಳೆ ಹೆಚ್ಚಾಗಿದ್ದು, ಬೆಂಗಳೂರಿನ ರಸ್ತೆಗಳು ಅಕ್ಷರಶಃ ಕೆರೆಯಂತಾಗಿವೆ. ಹಲವು ಕಡೆ ಮನೆಗಳಿಗೆ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಭೀಕರ ಮಳೆ ಹಿನ್ನೆಲೆ ಬೆಂಗಳೂರು ನಗರ ಜಿಲ್ಲಾಡಳಿತ, ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿನ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಿದೆ.

ಭಾರಿ ಮಳೆಯಾಗುತ್ತಿರುವ ಕಾರಣ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಅವರ ಅನುಮತಿಯ ಮೇರೆಗೆ ಆಗಸ್ಟ್ 30ರ ಮಂಗಳವಾರ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಿರುವುದಾಗಿ ಬೆಂಗಳೂರು ದಕ್ಷಿಣ ವಿಭಾಗದ ಡಿಡಿಪಿಐ ಬೈಲಾಂಜನಪ್ಪ ಮಾಹಿತಿ ನೀಡಿದ್ದಾರೆ.

ದಾಖಲೆ ಮಳೆ
ಇನ್ನು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಮಲ್ಲೇಶ್ವರಂನ ಕೆಲವು ರಸ್ತೆಗಳಲ್ಲಿ ನೀರು ತುಂಬಿದೆ. ವಾಹನ ಸವಾರರು ಹರಸಾಹಸ ಪಡ್ತಿದ್ದಾರೆ. ನಾಯಂಡಹಳ್ಳಿ,ಲಗ್ಗೆರೆ, ಶಿವಾನಂದ ವೃತ್ತ ಸೇರಿದಂತೆ ನಗರದ ಬಹುತೇಕ ಅಂಡರ್ ಪಾಸ್ ಗಳು ಮಳೆ‌ ನೀರಿನಿಂದ ಆವೃತವಾಗಿವೆ. ಉತ್ತರಹಳ್ಳಿ 39.5ಮಿ.ಮೀ, ನಾಯಂಡಗಳ್ಳಿ 49.5ಮಿ.ಮೀ ಮಳೆ, ಹಂಪಿ ನಗರ 44.5ಮಿ.ಮೀ ಮಳೆ, ಹೆಚ್.ಗೊಲ್ಲಹಳ್ಳಿ 44.5ಮಿ.ಮೀ, ಕೋಣನಕುಂಟೆ 55.0ಮಿ.ಮೀ, ಅರಕೆರೆ(ಬೊಮ್ಮನಹಳ್ಳಿ) 47.5ಮಿ.ಮೀ, ಬಿಳೇಕಹಳ್ಳಿ 60.5ಮಿ.ಮೀ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ಹಮಾವಾನ ಇಲಾಖೆ ಮಾಹಿತಿ ನೀಡಿದೆ.

ಧರೆಗುರುಳಿದ ಮರದ ಕೊಂಬೆ
ಇತ್ತ ಬೆಂಗಳೂರಿನ ಮಲ್ಲೇಶ್ವರಂನ 8ನೇ ಕ್ರಾಸ್‌ನಲ್ಲಿ ಮಳೆಯಿಂದಾಗಿ ಕೊಂಬೆ ಬಿದ್ದ ಪರಿಣಾಮ ರಸ್ತೆ ಬದಿ ನಿಲ್ಲಿಸಿದ್ದ ಕಾರು ಜಖಂ ಗೊಂಡಿದೆ. ಕಾರಿನಲ್ಲಿ ಯಾರೂ ಇಲ್ಲದಿದ್ದರಿಂದ ಅನಾಹುತ ತಪ್ಪಿದೆ.
 

SCROLL FOR NEXT