ರಾಜ್ಯ

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ನಮ್ಮ ನಿಲುವು ಸ್ಪಷ್ಟ ಎಂದ ಸಿಎಂ ಬೊಮ್ಮಾಯಿ, ಪ್ರಧಾನಿ ಮಧ್ಯಸ್ಥಿಕೆ ಕೋರಿದ ಸಿದ್ದರಾಮಯ್ಯ

Manjula VN

ಬೆಂಗಳೂರು, ಮೈಸೂರು: ರಾಜ್ಯ ಸರ್ಕಾರ ತನ್ನ ಹಿತಾಸಕ್ತಿ ಕಾಪಾಡಲು ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಮಹಾರಾಷ್ಟ್ರದೊಂದಿಗಿನ ಗಡಿ ವಿವಾದದ ಬಗ್ಗೆ ಈಗಾಗಲೇ ಸ್ಪಷ್ಟ ನಿಲುವನ್ನು ತಿಳಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದ ಹಿತ ಕಾಪಾಡಲು ಹಾಗೂ ಕನ್ನಡಿಗರ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. “ನಾವು ಈಗಾಗಲೇ ಡಿಜಿಪಿ ಮತ್ತು ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಯೊಂದಿಗೆ ಮಾತನಾಡಿದ್ದೇವೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೂ ಮಾತನಾಡಿದ್ದೇನೆ ಮತ್ತು ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದರು.

ಮಹಾರಾಷ್ಟ್ರ ಸಿಎಂ ಜತೆಗಿನ ಚರ್ಚೆಯ ವೇಳೆ ತಮ್ಮ ಕಡೆ ಶಾಂತಿ ಮತ್ತು ನೆಮ್ಮದಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಕರ್ನಾಟಕ ಈ ಬಗ್ಗೆ ಕಾಳಜಿ ವಹಿಸುತ್ತದೆ ಮತ್ತು ಯಾವುದೇ ಕಡೆಯಿಂದ ಯಾವುದೇ ಪ್ರಚೋದನೆ ಆಗಬಾರದು ತಿಳಿಸಿದರು.

ಇದೇ ವೇಳೆ ಗಡಿ ವಿವಾದ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚರ್ಚೆ ನಡಸೆಲು ಆಹ್ವಾನ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಗಡಿ ಸಮಸ್ಯೆಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ಸರ್ಕಾರಗಳೇ ಕಾರಣ ಎಂದು ಆರೋಪಿಸಿದರು.

ಉದ್ವಿಗ್ನತೆಯನ್ನು ಶಮನಗೊಳಿಸಲು ಮಧ್ಯಸ್ಥಿಕೆ ವಹಿಸಲು ಪ್ರಧಾನಿ ಮೋದಿಯವರು ವಿಫಲರಾಗಿದ್ದಾರೆ. ಈ ವಿಚಾರವಾಗಿ ಮೋದಿ ಅವರನ್ನು ಸಂಪರ್ಕಿಸಲು ಕರ್ನಾಟಕ ಬಿಜೆಪಿ ನಾಯಕರು ಹಿಂಜರಿಯುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

"ಗಡಿಯಲ್ಲಿ ಹಿಂಸಾಚಾರ ಏಕೆ ನಡೆಯುತ್ತಿದೆ ಮತ್ತು ಎರಡೂ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಇರುವಾಗ ಉದ್ವಿಗ್ನ ವಾತಾವರಣ ಏಕೆ? ಎಂದು ಪ್ರಶ್ನಿಸಿದರ ಅವರು, ಬಿಜೆಪಿ ಈ ವಿಷಯವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ ಎಂದರು.

ಎರಡು ರಾಜ್ಯಗಳ ನಡುವೆ ಸಾರ್ವಜನಿಕ ಸಾರಿಗೆಯನ್ನು ಹಿಂತೆಗೆದುಕೊಳ್ಳುವುದರಿಂದ ಜನರಿಗೆ ಸಮಸ್ಯೆಗಳಾಗಿವೆ. ಸಿಎಂ ಪರಿಸ್ಥಿತಿಯನ್ನು ಪ್ರಧಾನಿಗೆ ತಿಳಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಬೇಕು ಎಂದು ಹೇಳಿದರು.

ಈ ಕುರಿತು ಮಹಾಜನ್ ಆಯೋಗದ ವರದಿಯೇ ಅಂತಿಮವಾಗಿದ್ದು, ಗಡಿ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.

SCROLL FOR NEXT