ರಾಜ್ಯ

ಕರ್ನಾಟಕದ  ಒಂದೇ ಒಂದು ಗ್ರಾಮವನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲ್ಲ: ಡಿಕೆ ಶಿವಕುಮಾರ್

Nagaraja AB

ಬೆಳಗಾವಿ: ಬೆಳಗಾವಿ ಸುತ್ತಮುತ್ತಲಿನ ಮರಾಠಿ ಭಾಷಿಕರ ಹಳ್ಳಿಗಳನ್ನು ಸೇರಿಸಿಕೊಳ್ಳಲು ಮಹಾರಾಷ್ಟ್ರ ವಿಧಾನಸಭೆ ಅಂಗೀಕರಿಸುವ ನಿರ್ಣಯವನ್ನು ಖಂಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕರ್ನಾಟಕದ ಒಂದೇ ಒಂದು ಗ್ರಾಮವನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲ್ಲ ಎಂದು ಹೇಳಿದ್ದಾರೆ. 

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ವಿಚಾರದಲ್ಲಿ ಇಡೀ ರಾಜ್ಯ ಒಂದಾಗಿದ್ದು, ಮಹಾರಾಷ್ಟ್ರ ವಿಧಾನಸಭೆ ಅಂಗೀಕರಿಸುವ ನಿರ್ಣಯನ್ನು ಬಲವಾಗಿ ಖಂಡಿಸಲಾಗಿದೆ. ಮಹಾರಾಷ್ಟ್ರಕ್ಕೆ ನಮ್ಮ ಹಳ್ಳಿಗಳನ್ನು ಸೇರಿಸುವ ನಿರ್ಣಯನ್ನು ಇಡೀ ಕರ್ನಾಟಕ ಹಾಗೂ ಕಾಂಗ್ರೆಸ್ ಪಕ್ಷ ಬಲವಾಗಿ ಖಂಡಿಸಿದೆ. ಅದಕ್ಕೆ ನಮ್ಮ ವಿರೋಧ ವ್ಯಕ್ತಪಡಿಸಿದ್ದೇವೆ. ಕರ್ನಾಟಕದಿಂದ ಒಂದೇ ಒಂದು ಗ್ರಾಮವನ್ನು ಬಿಟ್ಟುಕೊಡಲು ನಾವು ಸಿದ್ಧರಿಲ್ಲ.  ರಾಜ್ಯದ ಹಿತ ಕಾಪಾಡಲು ರಾಜ್ಯದಲ್ಲಿರುವ ಪ್ರತಿಯೊಬ್ಬರು ಒಗ್ಗಟ್ಟಾಗಿರುವುದಾಗಿ ತಿಳಿಸಿದರು. 

ಕನ್ನಡ ಭಾಷೆ, ನಮ್ಮ ಹಳ್ಳಿಗಳು ಮತ್ತು ರಾಜ್ಯವನ್ನು ರಕ್ಷಿಸುವುದು ನಮ್ಮ ಕರ್ತವ್ಯ, ಈ ವಿಷಯಕ್ಕೆ ನಾವು ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧರಿದ್ದೇವೆ, ಅವರ ನಿರ್ಣಯವನ್ನು ನಾವು ವಿರೋಧಿಸುತ್ತೇವೆ, ನಾವು ಅದನ್ನು ವಿಧಾನಸಭೆಯಲ್ಲೂ ಪ್ರಸ್ತಾಪಿಸುತ್ತೇವೆ ಮತ್ತು ಕಾಂಗ್ರೆಸ್ ಚಳವಳಿಗೆ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಲು ಸಿದ್ಧವಿರುವುದಾಗಿ ಅವರು ಹೇಳಿದರು. 

ಮಹಾರಾಷ್ಟ್ರ- ಕರ್ನಾಟಕ ನಡುವೆ ಗಡಿ ವಿವಾದ ತಾರಕಕ್ಕೇರಿರುವಂತೆಯೇ ಬೆಳಗಾವಿ, ಕಾರವಾರ, ನಿಪ್ಪಾಣಿ, ಭಾಲ್ಕಿ, ಬೀದರ್ ನಗರ ಸೇರಿದಂತೆ 865 ಮರಾಠಿ ಭಾಷಿಕರ ಹಳ್ಳಿಗಳನ್ನು ಸೇರಿಸಿಕೊಳ್ಳಲು ಕಾನೂನಾತ್ಮಕ ಹೋರಾಟ ನಡೆಸುವ ನಿರ್ಣಯವನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. 

SCROLL FOR NEXT